ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಜನವರಿ 5ರ ಸೋಮವಾರದಂದು ಬೆಳಿಗ್ಗೆ 6 ಸಂಜೆ 6 ಗಂಟೆವರೆಗೆ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದ್ದು ನೇಕಾರರರನ್ನು ಉಳಿಸುವ ನಿಟ್ಟಿನಲ್ಲಿ ನೇಕಾರರನ್ನು ಬೆಂಬಲಿಸಿ ಎಲ್ಲರು ಬಂದ್ ನಲ್ಲಿ ಭಾಗವಹಿಸಬೇಕೆಂದು ನೇಕಾರ ಹೋರಾಟ ಸಮಿತಿ ಮುಖಂಡ ಪಿ ಎ ವೆಂಕಟೇಶ್ ಮನವಿ ಮಾಡಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ದೊಡ್ಡಬಳ್ಳಾಪುರ ಟೆಕ್ಸ್ಟೈಲ್ ವೀವರ್ಸ್ ಅಸೋಸಿಯೇಷನ್, ನೇಕರರ ಹೋರಾಟ ಸಮಿತಿ, ಕೂಲಿ ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಎಲ್ಲಾ ನೇಕಾರ ಸಂಘಟನೆಗಳು ಮತ್ತು ಸಹಕಾರಿ ಸಂಘಗಳ ಸಹಕಾರದೊಂದಿಗೆ ಜನವರಿ 5ರಂದು ಬಂದ್ ಕರೆ ನೀಡಲಾಗಿದೆ. ನೇಕಾರಿಕೆ ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆಯಾಗಿದ್ದು, ಇಂದು ನೇಕಾರರು ಅಳಿವಿನ ಅಂಚಿನಲ್ಲಿದ್ದೇವೆ ಲಾಳಿ ಸಹಿತ ವಿದ್ಯುತ್ ಮಗ್ಗಗಳ ಸೀರೆಗಳನ್ನು ಮಾರಾಟ ಮಾಡಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಸೂರತ್ ನ ರಿಪೀಯರ್ ಮಗ್ಗದ ಸೀರೆಗಳು ಇದಕ್ಕೆ ಕಡಿವಾಣ ಹಾಕುವ ಹಾಗೂ ನೇಕಾರರ ಪರಿಸ್ಥಿತಿಯನ್ನು ಸರಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಈ ಬಂದ್ ಕರೆಯಲಾಗಿದೆ ಎಂದರು.
ಪ್ರಮುಖ ಒತ್ತಾಯಗಳು-
ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆ ನೇಯ್ಗೆ ಉದ್ಯಮ ಉಳಿಸಲು ಲಾಳಿ ಸಹಿತ ವಿದ್ಯುತ್ ಮಗ್ಗಗಳ ಮೀಸಲಾತಿ (ರಿಸರ್ವೇಶನ್) ಅಧಿನಿಯಮ ರೂಪಿಸಲು
ನೇಯ್ದೆ ಉದ್ಯಮವನ್ನು ನಂಬಿರುವ ಲಕ್ಷಾಂತರ ಜನರ ಬದುಕನ್ನು ಉಳಿಸಲು ಸರ್ಕಾರ ತಕ್ಕಣ ಸೀರೆ ಖರೀದಿಸಲು ಒತ್ತಾಯಿಸಿ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿದ ಸೂರತ್ ಮತ್ತು ಬೆಳಗಾವಿ ಸೀರೆಗಳನ್ನು ನಿಲ್ಲಿಸಿ, ನೇಯ್ದೆ ಉದ್ಯಮ ಉಳಿಸಲು ಲಾಳಿರಹಿತ ರೇಪಿಯರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆ ರೂಪಿಸಬೇಕೆಂದು ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ಮತ್ತು ನೇಕಾರ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಧಾವಿಸಿ ಬರಬೇಕೆಂದು ಒತ್ತಾಯಿಸಿ ನೇಕಾರರು ಬಂದ್ ಗೆ ಮುಂದಾಗಿದ್ದಾರೆ.
ನೇಯ್ದೆ ಉದ್ಯಮ ನಂಬಿ ಲಕ್ಷಾಂತರ ಜನರು ಬದುಕನ್ನು ಸಾಗಿಸುತ್ತಿದ್ದಾರೆ. ಆದರೆ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿದ ಸೂರತ್ ಮತ್ತು ಬೆಳಗಾವಿ ಸೀರೆಗಳ ಹಾವಳಿಯಿಂದ ನಮ್ಮ ನೇಕಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನೇಕಾರಿಕೆ ಉದ್ಯಮ ಉಳಿಸಲು ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ ನೇಕಾರರರನ್ನು ಉಳಿಸಿಬೇಕು ಎಂದರು.
ಲಾಳಿರಹಿತ ರೇಪಿಯರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆ ರೂಪಿಸಿ ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ಮತ್ತು ನೇಕಾರ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಧಾವಿಸಿ ಬರಬೇಕೆಂದು ಮನವಿ ಮಾಡಿದರು.
ಮುಖಂಡರಾದ ನರಸಿಂಹಮೂರ್ತಿ ಮಾತನಾಡಿ ಈ ಸ್ವಯಂ ಪ್ರೇರಿತ ಬಂದ್ ಅನ್ನು ಬೆಂಬಲಿಸಲು ಊರಿನ ಎಲ್ಲಾ ಸಂಘ/ಸಂಸ್ಥೆಗಳು, ರಾಜಕೀಯ ಪಕ್ಷಗಳು, ರೈತ ಕಾರ್ಮಿಕ, ದಲಿತ, ಕನ್ನಡಪರ, ವಿದ್ಯಾರ್ಥಿ-ಯುವಜನ, ಮಹಿಳಾ ಸಂಘಗಳು, ಎಲ್ಲಾ ರೀತಿಯ ವ್ಯಾಪಾರ ಸಂಘಗಳು, ಎಲ್ಲಾ ನೇಕಾರ ಸಂಘಟನೆಗಳು, ಸಹಕಾರಿ ಸಂಘಗಳು ಭಾಗವಹಿಸಿ ಬೆಂಬಲಿಸಲಿವೆ.
ಜನವರಿ 4 ರಂದು ನಗರದ ಬಯಲು ಬಸವಣ್ಣ ದೇವಸ್ಥಾನದ ಮುಂಭಾಗದಿಂದ ಸಂಜೆ 4ಗಂಟೆಗೆ ಬೈಕ್ ರಾಲಿ ಏರ್ಪಡಿಸಲಾಗಿದೆ ಹಾಗೂ ಜನವರಿ 5ರಂದು ಸಿದ್ದಲಿಂಗಯ್ಯ ವೃತ್ತ (ಬಸ್ ನಿಲ್ದಾಣ) ದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಈ ಬಂದ್ ಯಶಸ್ವೀಗೊಳಿಸಲು ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕು ಎಂದರು.
ಈ ವೇಳೆ ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ದೊಡ್ಡಬಳ್ಳಾಪುರ ತಾಲೂಕು ಎಲ್ಲಾ ನೇಕಾರ ಸಂಘಟನೆಗಳು, ಮತ್ತು ನೇಕಾರ ಸಹಕಾರ ಸಂಘಗಳು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೇಕಾರ ಸಂಘಟನೆಗಳ ಮುಖಂಡರು, ಸರ್ವ ಪಕ್ಷಗಳ ಮುಖಂಡರು, ಜವಳಿ ಉದ್ಯಮದ ತಜ್ಞರು, ಜನಪ್ರತಿನಿಧಿಗಳು ಹಾಜರಿದ್ದರು.

