ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ಮನೆಯ ಮುಂಭಾಗದಲ್ಲಿ ನಡೆದ ದುಷ್ಕೃತ್ಯ ಆಘಾತ ಉಂಟುಮಾಡಿದೆ. ಈ ದುರ್ಘಟನೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಪ್ರಾಯೋಜಿಸಿರುವ ಸಂಚಿನ ಭಾಗವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಯ ಬ್ಯಾನರ್ ಅಳವಡಿಸುವುದು ಈ ಗಲಭೆಯ ಹಿಂದೆ ಕೇವಲ ಒಂದು ನೆಪವಷ್ಟೇ ಆಗಿತ್ತು. ಜನಾರ್ದನ ರೆಡ್ಡಿಯವರು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿ ದಾಳಿ ನಡೆಸಲು ಕಾಂಗ್ರೆಸ್ ಬೆಂಬಲಿತ ಗುಂಪು ಸಜ್ಜಾಗಿ ಬಂದಿತ್ತು. ಇಲ್ಲವಾದರೆ ಬಳ್ಳಾರಿಯಲ್ಲಿ ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಬ್ಯಾನರ್ ಕಟ್ಟುವವರು ಬರುತ್ತಿದ್ದರೇ? ಇದರ ಹಿಂದೆ ಸಂಚಿನ ಜಾಲ ಬಹಳ ಆಳವಾಗಿರುವುದು ಸ್ಪಷ್ಟವಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿ, ಸ್ವತಃ ಕಾಂಗ್ರೆಸ್ ಶಾಸಕರ ಆಡಳಿತದಲ್ಲಿ ಬಳ್ಳಾರಿ ಇಂದು ಶಾಪಗ್ರಸ್ಥವಾಗಿದೆ. ದುಷ್ಕರ್ಮಿಗಳು ತನ್ನ ಹತ್ಯೆ ನಡೆಸುವ ಉದ್ದೇಶದಿಂದಲೇ ಬಂದಿದ್ದರು ಎಂದು ಜನಾರ್ದನ ರೆಡ್ಡಿಯವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಇದು ನಿಜಕ್ಕೂ ಖಂಡನೀಯ ಬೆಳವಣಿಗೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.
ರಾಮಸೇತು ವಿಚಾರಕ್ಕೆ ಸಂಬಂಧಿಸಿದಂತೆ, ಸ್ವತಃ ಕಾಂಗ್ರೆಸ್ ಪಕ್ಷ ರಾಮಾಯಣ ನಡೆದಿತ್ತು ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿಕೆ ನೀಡಿತ್ತು. ಭಾರತೀಯರ ಶ್ರದ್ಧೆಯ ವಿಚಾರವಾದ ರಾಮನ ಅಸ್ತಿತ್ವವನ್ನೇ ಕಾಂಗ್ರೆಸ್ ನಿರಾಕರಿಸಿತ್ತು. ಆ ಮೂಲಕ ಮಹರ್ಷಿ ವಾಲ್ಮೀಕಿಯವರ ಅಸ್ಥಿತ್ವವನ್ನೂ ಕಾಂಗ್ರೆಸ್ ತಳ್ಳಿಹಾಕಿತ್ತು. ಆದರೆ, ಶ್ರದ್ಧೆ – ನಂಬಿಕೆಯುಳ್ಳ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ವಾಲ್ಮೀಕಿ ಜಯಂತಿ ಆಚರಣೆಗೆ ತಂದಿತ್ತು.
ಬಳ್ಳಾರಿಯ ದುಷ್ಕರ್ಮಿಗಳು ಪ್ರಜಾಪ್ರಭುತ್ವ ವಿರೋಧಿಗಳಾಗಿದ್ದು, ಬಳ್ಳಾರಿಯನ್ನು ‘ಗೂಂಡಾಗಿರಿಯ ರಿಪಬ್ಲಿಕ್‘ಆಗಿ ಪರಿವರ್ತಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಜನಾರ್ದನರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಬಳ್ಳಾರಿಯಲ್ಲಿ ಬಿಜೆಪಿ ಮತ್ತೆ ಪ್ರಬಲವಾಗುತ್ತಿರುವುದು ಕಾಂಗ್ರೆಸ್ ದುಷ್ಕರ್ಮಿಗಳ ಆತಂಕಕ್ಕೆ ಕಾರಣವಾಗಿದೆ. ಈಗ ಜನಾರ್ದನ ರೆಡ್ಡಿಯವರು ಮತ್ತು ಶ್ರೀರಾಮುಲು ಮತ್ತೆ ಕೈಜೋಡಿಸಿರುವುದು ಮತ್ತೆ ಕಾಂಗ್ರೆಸ್ ತಳಪಾಯ ಅಲ್ಲಾಡುವಂತೆ ಮಾಡಿದೆ. ಇದು ಕಾಂಗ್ರೆಸ್ಸಿನ ‘ಬಳ್ಳಾರಿ ಗ್ಯಾಂಗಿ‘ಗೆ ಸಹಿಸಲು ಅಸಾಧ್ಯವಾಗಿದೆ ಎಂದು ಸಿ.ಟಿ ರವಿ ಹೇಳಿದ್ದಾರೆ.
ಕರ್ನಾಟಕದಲ್ಲೂ ಜಂಗಲ್ ರಾಜ್ ಮಾಡುವ ಕಾಂಗ್ರೆಸ್ ಸರ್ಕಾರದ ಪ್ರಯತ್ನ ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಸರ್ಕಾರ ಪೊಲೀಸ್ ಇಲಾಖೆಯನ್ನು ಅಸಮರ್ಥಗೊಳಿಸಿದ್ದು, ಬಳ್ಳಾರಿಯಲ್ಲಿ ಪೊಲೀಸ್ ಇಲಾಖೆಯನ್ನು ಮನ ಬಂದಂತೆ ಕಾಂಗ್ರೆಸ್ ಕುಣಿಸುತ್ತಿದೆ.
ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು. ಬಳ್ಳಾರಿಯಲ್ಲಿ ಜಂಗಲ್ ರಾಜ್ ಮಾಡಲು ಬಿಡದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಈ ವಿಚಾರದ ಕುರಿತಂತೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಸಿ.ಟಿ ರವಿ ಅವರು ಆಗ್ರಹಿಸಿದ್ದಾರೆ.

