ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ಬ್ಯಾನರ್ ಕಟ್ಟುವ ವೇಳೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಗುಂಡೇಟಿಗೆ ಬಲಿಯಾದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಫೈರಿಂಗ್ ಆದ ಘಟನೆಯಲ್ಲಿ ಬಳಕೆಯಾದ ಬುಲೆಟ್ನ ಮೂಲದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಅಲ್ಲದೆ ಯಾರ ಗನ್ನಿಂದ ಬುಲೆಟ್ ಬಂದಿದೆ ಎಂಬುದು ಗೊತ್ತಾಗಬೇಕು. ಅದು ಬಿಜೆಪಿ ಅವರ ಗನ್ನಿಂದ ಬಂದಿದೆಯಾ? ಇಲ್ಲ ಕಾಂಗ್ರೆಸ್ನವರ ಗನ್ನಿಂದ ಬಂದಿದೆಯಾ? ಎಂದು ಪತ್ತೆಹಚ್ಚಬೇಕಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿಗಳು ಖಾಸಗಿ ಬುಲೆಟ್ ಎಂದು ಮಾಹಿತಿ ನೀಡಿದ್ದಾರೆ. ಸತೀಶ್ ರೆಡ್ಡಿ ಅವರು ತಮ್ಮ ಭದ್ರತೆಗಾಗಿ ಗನ್ ಇಟ್ಟುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ರಾಜಶೇಖರ್ ರೆಡ್ಡಿ ಅವರಿಗೆ ತಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ, ರಾಜಶೇಖರ್ ರೆಡ್ಡಿ ಅವರ ಸಾವಿಗೆ ಕಾರಣವಾದ ಬುಲೆಟ್ ಮತ್ತು ಗನ್ನ ಮೂಲದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

