ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಕ್ಷರ ವಂಚಿತ ಸಮುದಾಯಗಳ ಬದುಕಿಗೆ ಶಿಕ್ಷಣ ಕ್ರಾಂತಿಯ ಅಡಿಗಲ್ಲು ಹಾಕಿ ಸಾಮಾಜಿಕ ಅಸಮಾನತೆ ಶೋಷಣೆ ಮೂಢನಂಬಿಕೆಗಳ ವಿರುದ್ಧ ಸಿಡಿದು ಭಾರತೀಯರ ಮಹಿಳೆಯರ ಕಲಿಕೆಗೆ ಭದ್ರ ಬುನಾದಿ ಹಾಕಿದ ಮಹಿಳೆ ಮಾತೆ ಸಾವಿತ್ರಿಬಾಯಿ ಪುಲೆ ಆಗಿದ್ದಾರೆ ಎಂದು ಖ್ಯಾತ ಸಮಾಜ ವಿಜ್ಞಾನಿ ಹಾಗೂ ಎನ್ಎಸ್ಎಸ್ ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ ಧರಣೇಂದ್ರಯ್ಯ ಅಭಿಪ್ರಾಯ ಪಟ್ಟರು.
ತಾಲೂಕಿನ ಭೀಮನ ಬಂಡೆ ಗ್ರಾಮದ ಯಜ್ಞ ವಲ್ಕ್ಯ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ ಹಾಗೂ ಯಜ್ಞವಲ್ಕ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜ್ ಭೀಮನ ಬಂಡೆ ಇವರುಗಳ ಸಂಯುಕ್ತಾಕ್ಷರದಲ್ಲಿ ಆಯೋಜಿಸಿದ್ದ ಭಾರತದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ರವರ 195 ನೇ ಜನ್ಮದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಶೋಷಣೆ ಅತ್ಯಾಚಾರ ಮಹಿಳಾ ಪಹರಣ ಹಾಗೂ ಮಾರಾಟ ಮರ್ಯಾದೆ ಹತ್ಯೆ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕಕಾರಿ ಬೆಳವಣಿಗೆ ಅಲ್ಲದೆ ಧರ್ಮ ಜಾತಿ ಹೆಸರಿನಲ್ಲಿ ಅಮಾನವೀಯ ಕೃತ್ಯಗಳು ಎಸಗುತ್ತಿರುವುದು ಕಂಡುಬರುತ್ತಿದ್ದು ಇವುಗಳಿಂದ ಮಾನವ ಸಂಬಂಧಗಳಲ್ಲಿ ಹೊಂದಾಣಿಕೆ ಹಾಗು ಐಕ್ಯತೆಗೆ ಧಕ್ಕೆಯಾಗಿದ್ದು ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಯಜ್ಞವಲ್ಕ್ಯ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಟಿ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿನ ಇತಿಹಾಸದಲ್ಲಿ ಶಿಕ್ಷಣ ಕ್ರಾಂತಿಯ ಹೆಜ್ಜೆಗಳು ಹೆಚ್ಚು ಹೆಚ್ಚು ಗಟ್ಟಿಯಾಗಿ ನಿಂತಿರುವುದು ಭಾರತ ದೇಶದ ನೆಲೆಗಳಲ್ಲಿ ಶಿಕ್ಷಣವೆಂಬುದು ಕೆಲವೊಂದು ಸಮುದಾಯಕ್ಕೆ ಸೀಮಿತವಾದ ಸಂದರ್ಭದಲ್ಲಿ ಅವಕಾಶ ವಂಚಿತ ಶೂದ್ರಾತಿಶೂದ್ರ ಹಾಗೂ ಬಡವರ್ಗದ ಹೆಣ್ಣು ಮಕ್ಕಳ ಕಲಿಕೆಗಾಗಿ ದಿಟ್ಟ ಹೆಜ್ಜೆ ಅವರ ಶ್ರೇಯೋಭಿವೃದ್ದಿಗೆ ಹೋರಾಡಿದ ಮಾತೆ ಸಾವಿತ್ರಿಬಾಯಿ ಪುಲೆಯವರು ಇಂದಿನ ಮಹಿಳೆಯರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಬದುಕಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕಿ ಭಾನುಮತಿ ಮಾತನಾಡಿ ರೂಢಿ ಸಂಪ್ರದಾಯ ಕಂದಾಚಾರ ಮೂಢನಂಬಿಕೆ ಸಾಮಾಜಿಕ ಪಿಡುಗು ಹಾಗೂ ತನಗಾದ ಅವಮಾನಗಳ ಮೆಟ್ಟಿನಿಂತು ಭಾರತೀಯ ಮಹಿಳೆಯರಿಗೆ ಶಿಕ್ಷಣವನ್ನು ಕಲಿಸಿ ಸ್ವಂತ ಖರ್ಚಿನಿಂದ ಶಾಲೆಗಳನ್ನು ತೆರೆದು ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿದ ಕೀರ್ತಿ ಸಾವಿತ್ರಿಬಾಯಿ ಪುಲೆ ದಂಪತಿಗಳಿಗೆ ಸಲ್ಲುತ್ತದೆ.
ಶಿಕ್ಷಣವು ಒಂದು ಮಹೋನ್ನತ ಶಕ್ತಿ ಎಂಬುದನ್ನು ತೋರಿಸಿಕೊಡುವ ಮೂಲಕ ಭಾರತದ ಸ್ತ್ರೀಯರಿಗೆ ಸಾವಿತ್ರಿಬಾಯಿ ಫುಲೆ ಅವರು ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಹಿಳಾ ಸಾಧಕಿ ನಿವೃತ್ತ ಮುಖ್ಯ ಶಿಕ್ಷಕಿ ಟಿ ಯಮುನಾ, ಭಾನುಮತಿ, ಮನವಿ ಟ್ರಸ್ಟ್ ಕಾರ್ಯದರ್ಶಿ ಮಾನಸ ಮಂಜುನಾಥ್, ತಾಲ್ಲೂಕಿನ ಇನ್ನರ್ ವೀಲ್ ಕ್ಲಬ್ ನ ಮಾಜಿ ಅಧ್ಯಕ್ಷೆ ಟಿ ಸರ್ವಮಂಗಳ, ನ್ಯಾಷನಲ್ ಇನ್ಸ್ಪೈರ್ ಅವಾರ್ಡ್ ಪ್ರಶಸ್ತಿ ಪುರಸ್ಕೃತೆ ಎಚ್ ವಿ ರುಕ್ಮಿಣಿ ಗೋವಿಂದರಾಜು, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಆರ್.ಎ ಸ್ವಪ್ನಾ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್ ಜಿ ರಂಗಸ್ವಾಮಿ ಸಕ್ಕರ, ಯುವ ಮುಖಂಡ ಮಂಜುನಾಥಗೌಡ, ಉಪನ್ಯಾಸಕರಾದ ಯು.ಹರ್ಷ, ಕೆ ಶಿವಾನಂದ್, ಆರ್ ರಂಗನಾಥ್, ವರದೇಗೌಡ, ಮಹಾಂತೇಶ್, ಪ್ರವೀಣ್, ಅಭಿಷೇಕ್, ಸರಸ್ವತಿ, ತೇಜು, ಸಿಂಧು, ಅನನ್ಯ, ಭಾಗ್ಯ ಹಾಗೂ ಇತರರು ಉಪಸ್ಥಿತರಿದ್ದರು.

