ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ನಡೆದ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಘಟನೆಯ ತನಿಖೆಯಲ್ಲಿ ಹಲವು ಅನುಮಾನಗಳು ಮತ್ತು ಗಂಭೀರ ಲೋಪಗಳಿವೆ ಎಂದು ಆರೋಪಿಸಿದರು.
ಮೃತ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂಬ ಸ್ಫೋಟಕ ಆರೋಪ ಮಾಡಿದ ಕುಮಾರಸ್ವಾಮಿ, ಈ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು. ಎರಡು ಬಾರಿ ಶವ ಪರೀಕ್ಷೆ ಮಾಡಿದ್ದೀರಿ? ಮೊದಲ ಬಾರಿ ಏನು ವರದಿ ಬಂತು? ಎರಡನೇ ಬಾರಿ ಯಾರು ಒತ್ತಾಯ ಮಾಡಿದರು? ಯಾರ ಅನುಮತಿಯಲ್ಲಿ ಮತ್ತೆ ಶವ ಪರೀಕ್ಷೆ ನಡೆಸಲಾಯಿತು? ಯಾರನ್ನು ಮೆಚ್ಚಿಸಲು ಈ ಆದೇಶ ಎಂದು ಕುಮಾರಸ್ವಾಮಿ ಸರಣಿ ಪ್ರಶ್ನೆಗಳನ್ನು ರಾಜ್ಯ ಸರ್ಕಾರಕ್ಕೆ ಕೇಳಿದ್ದಾರೆ.
ಮೊದಲು ಮಾಡಿರುವ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ತೆಗೆಯಲಾಗಲಿಲ್ಲ ಎಂಬ ಮಾಹಿತಿ ಇದೆ. ಇದಕ್ಕೆ ಕಾರಣವೇನು? ಇದನ್ನು ಸಮಗ್ರವಾಗಿ ತನಿಖೆ ಮಾಡುತ್ತೀರಾ ಅಥವಾ ನ್ಯಾಯವನ್ನು ಮರೆಮಾಚುತ್ತೀರಾ? ರಾಜ್ಯದ ಜನರಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಬ್ಯಾನರ್ ಕಟ್ಟುವ ವಿಚಾರದಲ್ಲಿನ ಗಲಾಟೆಯನ್ನೇ ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಹತ್ಯೆಯಾಗಿದೆ. ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ಡಿಯನ್ನು ಬಂಧಿಸಿದ್ದೀರಾ ಅಥವಾ ರಾಜಾತಿಥ್ಯ ನೀಡಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೀರಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದರು.
ಬಳ್ಳಾರಿ ಘಟನೆಗೆ ಯಾರು ಹೊಣೆಗಾರರು:
ಮುಂದುವರೆದು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಬಳ್ಳಾರಿ ಗಲಭೆ ಪ್ರಕರಣದಲ್ಲಿ ಬಳ್ಳಾರಿ ಎಸ್‌ಪಿಯನ್ನು ಮಾತ್ರ ಅಮಾನತು ಮಾಡಲಾಗಿದೆ. ಐಜಿ, ಎಎಸ್ಪಿ, ಡಿವೈಎಸ್‌ಪಿ ಅವರಿಗೆ ಬಳ್ಳಾರಿಯ ಹಿನ್ನೆಲೆ ಗೊತ್ತಿರಲಿಲ್ಲವೇ? ಅವರನ್ನು ಯಾಕೆ ಅಮಾನತು ಮಾಡಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಬಳ್ಳಾರಿ ಗಲಾಟೆ, ಗುಂಡೇಟು ಬಿದ್ದು ಯುವಕನ ಸಾವಿಗೆ ಯಾವ ಅಧಿಕಾರಿಗಳು ನಿಜವಾದ ಹೊಣೆಗಾರರು ಎಂಬುದನ್ನು ಸರ್ಕಾರ ಜನರ ಮುಂದೆ ನೈಜ ವರದಿ ಇಡಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದರು.
ಬಳ್ಳಾರಿ ಪ್ರವೇಶಕ್ಕೆ ಜನಾರ್ದನ ರೆಡ್ಡಿಗೆ ಅನುಮತಿ ನೀಡಿದ ಬಳಿಕ ಎಷ್ಟು ಗಲಭೆಗಳು ನಡೆದಿವೆ ಎಂಬ ವಿವರಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಕೇಂದ್ರ ಸಚಿವರು ಆಗ್ರಹ ಮಾಡಿದರು.
ಜನವರಿ 3ರಂದು ನಡೆದ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿತ್ತೇ? ಅನುಮತಿ ಇಲ್ಲದಿದ್ದರೆ ಯಾವ ಅಧಿಕಾರದ ಆಧಾರದ ಮೇಲೆ ಕಾರ್ಯಕ್ರಮ ನಡೆಸಲಾಯಿತು ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಮೂಟೆಯಲ್ಲಿ ಕೊಟ್ಟಿದ್ದುಯಾರ ಹಣ:
ಗುಂಡೇಟಿನಿಂದ ಮೃತಪಟ್ಟ ಯುವಕ ರಾಜಶೇಖರ್ ರೆಡ್ಡಿ ಅವರ ಕುಟುಂಬಕ್ಕೆ ಮೂಟೆಯಲ್ಲಿ ತೆಗೆದುಕೊಂಡು ಹೋಗಿ ಕೊಟ್ಟ25 ಲಕ್ಷ ರೂಪಾಯಿ ಯಾರ ಹಣ? ಸರ್ಕಾರದ ಹಣವೇ ಅಥವಾ ಖಾಸಗಿ ಹಣವೇ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಸಿಬಿಐ ತನಿಖೆಗೆ ಆಗ್ರಹ:
ಬಳ್ಳಾರಿಯಲ್ಲಿ ನಡೆದಿರುವ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಬಿಐ ತನಿಖೆ ಹೊರತುಪಡಿಸಿದರೆ ಬೇರೆ ಯಾವುದೇ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ವಿಪಕ್ಷ ನಾಯಕರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶಾಸಕರ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ರಾಜ್ಯ ಸರ್ಕಾರವೇ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ನಿಮ್ಮ ಆಡಳಿತವನ್ನು ಇತಿಹಾಸ ಹೇಗೆ ದಾಖಲಿಸಲಿದೆ ಎಂಬುದನ್ನು ನೀವು ಯೋಚಿಸಬೇಕು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿ ಬಳ್ಳಾರಿ ಗಲಭೆ ಪ್ರಕರಣದಲ್ಲಿ ಐಜಿ, ಎಎಸ್ಪಿ ಹಾಗೂ ಡಿವೈಎಸ್‌ಪಿಯನ್ನು ಕೂಡ ಅಮಾನತು ಮಾಡಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಮಗನ ಮನೆಗೆ ನುಗ್ಗಿ ಅರೆಸ್ಟ್:
ಮಾಜಿ ಪ್ರಧಾನಿ ಮಗ ಹೆಚ್.ಡಿ ರೇವಣ್ಣ ಅವರನ್ನ ಬಂಧಿಸಿದ್ದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡಿದ ಕುಮಾರಸ್ವಾಮಿ, ಬಳ್ಳಾರಿ ಗಲಭೆ ಪ್ರಕರಣ ಸಂಬಂಧ ಇಬ್ಬರನ್ನು ಹೋಟೆಲ್ನಲ್ಲಿ ಇಟ್ಟುಕೊಂಡು ತನಿಖೆ ಮಾಡುತ್ತಿದ್ದಾರಂತೆ. ಮಾಜಿ ಪ್ರಧಾನಿ ಮಗನನ್ನು ಮನೆಗೆ ನುಗ್ಗಿ ಅರೆಸ್ಟ್ ಮಾಡಿಸಿದ್ದೀರಿ. ಅವರೇನು ಅಂತಹ ತಪ್ಪು ಮಾಡಿದ್ದರು? ಎಲ್ಲಾ ನೆನಪು ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿ ಸೂಕ್ತ ತನಿಖೆ ಆಗಬೇಕಾದರೆ ಸಿಬಿಐಗೆ ವಹಿಸಲು ಆಗ್ರಹ ಮಾಡಿದರು.

