ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು ಮೃತರ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೃತ ಕಾರ್ಯಕರ್ತನ ಮನೆಗೆ ಭೇಟಿ ನೀಡಿದಾಗ ಮೃತ ರಾಜಶೇಖರ ತಾಯಿ ತುಳಸಿ ಅವರು ಕಣ್ಣೀರು ಹಾಕಿ ಇಡೀ ಮನೆಗೆ ರಾಜಶೇಖರ್ ಆಧಾರವಾಗಿದ್ದ ಅಳಲು ತೋಡಿಕೊಂಡರು.
ಇಡೀ ಪಕ್ಷವೇ ರಾಜಶೇಖರ ಕುಟುಂಬಸ್ಥರ ಜೊತೆ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅವರು, ಹೊಸ ವರ್ಷದೊಂದು ನಡೆದ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತನ ಸಾವಾಗಿದೆ. ಮೃತ ರಾಜಶೇಖರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವೆ. ಘಟನೆ ಅಗಬಾರದಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುವೆ. ಕುಟುಂಬ ಜೊತೆಗೆ ಪಕ್ಷ ಇದೆ ಎಂದು ತಿಳಿಸಲು ಬಂದಿದ್ದೇನೆ ಎಂದು ತಿಳಿಸಿದರು.
ಮೃತ ವ್ಯಕ್ತಿಯ ಕುಟುಂಬ ಸರ್ಕಾರಿ ಉದ್ದೋಗಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ವಿಚಾರ ಮಾಡಲಾಗುತ್ತದೆ. ಪ್ರೊಸೀಜರ್ ನೋಡಿಕೊಂಡು ಕಾನೂನು ಚೌಕಟ್ಟಿನ ಅಡಿ ನೌಕರಿ ಕೊಡುವ ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಇದ್ದರು.

