ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದ ‘ಜೀವಜಲ‘ ಸಮುದ್ರ ಪಾಲಾಗುತ್ತಿದೆ. ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್ ಗೇಟ್ ಕೊಚ್ಚಿ ಹೋಗಿ 6 ಟಿಎಂಸಿಗೂ ಹೆಚ್ಚು ನೀರು ಪೋಲಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಕಡೆಗಣನೆಯಿಂದ ಕಳೆದ ಆಗಸ್ಟ್ ನಲ್ಲಿ ತುಂಗಭದ್ರಾ ಡ್ಯಾಂನಿಂದ 40 ಟಿಎಂಸಿ ನೀರು ಪೋಲಾಗಿದ್ದನ್ನು ಇಡೀ ರಾಜ್ಯ ನೋಡಿದೆ. ಈಗ ಹಿಪ್ಪರಗಿ ಬ್ಯಾರೇಜ್‌ನ 6 ಟಿಎಂಸಿ ನೀರು ಪೋಲಾಗಿದ್ದರೂ ಜಲಾಶಯಗಳ ಗೇಟ್‌ರಿಪೇರಿ ಮಾಡಿಸದೆ ಈ ಭಾಗದ ಜನರಿಗೆ ದ್ರೋಹ ಬಗೆದಿದೆ ಎಂದು ಟೀಕಿಸಿದರು.
ಕುರ್ಚಿಗಾಗಿ ಹಗಲಿರುಳು ಹೋರಾಡುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಕಣ್ಣೆದುರೇ ಜಲಾಶಯಗಳು ಬರಿದಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದೇಕೆ? ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದರೆ ಗೌರವಯುತವಾಗಿ ರಾಜೀನಾಮೆ ಕೊಡಿ! ಎಂದು ಅಶೋಕ್ ತಾಕೀತು ಮಾಡಿದ್ದಾರೆ.

