ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ರಾಜೀವ್ ಗಾಂಧಿ ಬಡಾವಣೆಯ 1ನೇ ಹಂತದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿನೋದ್ ರಾಜ್, ಜಗದೀಶ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್ ಹಾಗೂ ಇತರೆ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಮೇಶ್ ಮಾತನಾಡಿ ಮಕ್ಕಳಲ್ಲಿ ಇಂತಹ ಚಟುವಟಿಕೆಗಳು ಕಲಿಕಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ ಅಲ್ಲದೇ ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಚಟುವಟಿಕೆ ಮೂಲಕ ಪರಿಚಯಿಸಿದಂತಾಗುತ್ತದೆ. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಹೊರ ತರಲು ಈ ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದರು.
ನಗರದ ರಾಜೀವ್ ಗಾಂಧಿ ಬಡಾವಣೆಯ ಅಂಗನವಾಡಿಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಪುಟಾಣಿ ಮಕ್ಕಳು ದಿನಸಿ ವ್ಯಾಪಾರಿಯಾಗಿ, ಹೂವಿನ ವ್ಯಾಪಾರಿಯಾಗಿ, ಕುಂಬಾರರಾಗಿ, ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಾಗಿ, ಎಲೆ ಅಡಿಕೆ ವ್ಯಾಪಾರಿಯಾಗಿ, ಆಟಿಕೆ ಮಾರಾಟಗಾರರಾಗಿ, ಹೈನುಗಾರಿಕೆ ಪ್ರತಿನಿಧಿಸುವ ಮೇಕೆ ಕುರಿ ಸಾಕಾಣಿಕೆದಾರರಾಗಿ ಹೀಗೆ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡು ಅಧಿಕಾರಿಗಳನ್ನು, ಪೋಷಕರನ್ನು ಗಮನ ಸೆಳೆದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ರಾಜ್ ಮಾತನಾಡಿ ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ಥಳೀಯ ಅಂಗನವಾಡಿ ಶಿಕ್ಷಕರಾದ ನಂದಿನಿ ಹಾಗೂ ಸಹಾಯಕರ ಶ್ರಮ ಅಪಾರವಾದದ್ದು, ಪುಟಾಣಿ ಮಕ್ಕಳಯಿಂದ ಮಕ್ಕಳ ಸಂತೆಯಂತಹ ಕಾರ್ಯಕ್ರಮ ರೂಪಿಸಿ ಯಶಸ್ವಿಗೊಳಿಸುವುದು ಅಷ್ಟು ಸುಲಭವಲ್ಲ. ಇಂತಹ ಕಾರ್ಯಕ್ರಮಗಳಿಂದ ಅಂಗನವಾಡಿಗಳ ಬಗ್ಗೆ ಪೋಷಕರಿಗೆ ಉತ್ತಮ ಭಾವನೆ ಮೂಡುವುದಲ್ಲದೆ ಮಕ್ಕಳ ಕಲಿಕಾ ಮಟ್ಟವು ಉತ್ತಮಗೊಳ್ಳುತ್ತದೆ ಎಂದರು.
ಈ ವೇಳೆ ಜಿಲ್ಲಾ ನಿರೂಪಣಾಧಿಕಾರಿಗಳು ರಮೇಶ್, ಮಹಿಳಾ ಕಲ್ಯಾಣ ಅಧಿಕಾರಿ ಜಗದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ರಾಜ್ , ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ರೂಪ, ವೃತ್ತದ ಮೇಲ್ವಿಚಾರಕಿ ಚೇತನಾ. ಆರ್ ಹಾಗೂ ಹಿರಿಯ ಮೇಲ್ವಿಚಾರಕಿ ಲಕ್ಷ್ಮಿ, ನಿರ್ಮಲ, ಅಂಗನವಾಡಿ ಕಾರ್ಯಕರ್ತೆ ಶ ನಂದಿನಿ ಹಾಗೂ ಅಂಗನವಾಡಿ ಸಹಾಯಕಿ ಆಶಾ ಸೇರಿದಂತೆ ಪೋಷಕರು ಹಾಜರಿದ್ದರು.

