ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಬಿ ಜಿ ರಾಮ್ ಜಿ ಕಾಯ್ದೆ: ರಾಜ್ಯ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುವ ಅನ್ಯಾಯದ ಬಗ್ಗೆ 2 ದಿನಗಳವಿಶೇಷ ಅಧಿವೇಶನ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಹಾಗೂ ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕು ರಕ್ಷಿಸಲು ಎಐಸಿಸಿ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ “ನರೇಗಾ ಉಳಿಸಿ” ಜನಾಂದೋಲನ ಆಯೋಜನೆ ಸಂಬಂಧ ಇಂದು ನಡೆದ ಮಂತ್ರಿಗಳು, ಸಂಸದರು, ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿ, ವಿಬಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಶಾಸಕರು, ಸಂಸದರ ಸಭೆ ನಡೆಸಲಾಗಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು, ಮನರೇಗಾ ವಾಪಸ್ ತರಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ.
ಸದ್ಯದಲ್ಲೇ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಹಾಗೂ ಬೂತ್ ಅಧ್ಯಕ್ಷರ ಸಭೆ ಕರೆಯಲಾಗುವುದು. ಕೇಂದ್ರ ಸರ್ಕಾರದ ಈ ಕಾನೂನು ದೇಶಕ್ಕೆ ಬಹು ದೊಡ್ಡ ಮಾರಕವಾಗಿದ್ದು, ಇದನ್ನು ತೆಗೆದುಹಾಕಿ, ಮನರೇಗಾ ಪುನಃ ಸ್ಥಾಪನೆಗೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು. ಜ. 26 ರಿಂದ ಫೆ. 2ರವರೆಗೆ ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಉದ್ಯೋಗ ಕಾರ್ಡ್ ಹೊಂದಿರುವ ಕಾರ್ಮಿಕರ ಜತೆ ಈ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.
ಮೂರು ದಿನ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲಾಗುವುದು. ಪ್ರತಿ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಮನರೇಗಾ ಬದಲಾವಣೆ ಮೂಲಕ 6000 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ನಮ್ಮ ರಾಜ್ಯದಿಂದ ಕಸಿದುಕೊಳ್ಳಲಾಗಿದೆ ಎಂದು ಡಿಸಿಎಂ ದೂರಿದರು.
ಇಷ್ಟು ದಿನ ಪಂಚಾಯ್ತಿಗಳು ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುತ್ತಿದ್ದವು. ಈಗ ದೆಹಲಿಯಿಂದ ನಿರ್ದೇಶನ ಮಾಡಿದ ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಈ ಬದಲಾವಣೆ ಬಗ್ಗೆ ರಾಜ್ಯಗಳ ಜತೆ ಸಮಾಲೋಚನೆ ನಡೆಸಬೇಕಿತ್ತು. ಈ ಬದಲಾವಣೆಯಿಂದ ಗ್ರಾಮೀಣ ಭಾಗದ ಜನರ ಉದ್ಯೋಗ ಹಕ್ಕು ಕಸಿಯಲಾಗಿದೆ. ಸಂವಿಧಾನದ 73, 74ನೇ ತಿದ್ದುಪಡಿ ಪ್ರಕಾರದ ಹಕ್ಕನ್ನು ಕಸಿಯಲಾಗಿದೆ ಎಂದು ಡಿಸಿಎಂ ದೂರಿದರು.
ಮನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಒಂದು ವಾರದಲ್ಲಿ ಕೂಲಿ ಕೊಡುವ ಶಕ್ತಿ ಇತ್ತು. ಇದನ್ನೆಲ್ಲಾ ಮುಗಿಸಿ ಹೊಸ ರೂಪದಲ್ಲಿ ಅನ್ಯಾಯ ಮಾಡಿದ್ದಾರೆ. ಮನರೇಗಾದಲ್ಲಿ 90% ಅನುದಾನ ಕೇಂದ್ರ ಸರ್ಕಾರ ನೀಡುತ್ತಿತ್ತು. ಈಗ 60% ಕೇಂದ್ರ ಸರ್ಕಾರ, 40% ರಾಜ್ಯ ಸರ್ಕಾರ ಕೊಡಬೇಕು ಎಂದು ಬದಲಾವಣೆ ತಂದಿದ್ದಾರೆ. ಇದು ಒಕ್ಕೂಟ ವ್ಯವಸ್ಥೆ ವಿಚಾರವಾಗಿದ್ದು, ಈ ವಿಚಾರಗಳನ್ನ ರಾಜ್ಯಗಳ ಜೊತೆ ಚರ್ಚೆ ಮಾಡಬೇಕಿತ್ತು. ಇದನ್ನೆಲ್ಲಾ ಬಿಟ್ಟು ರಾತ್ರೊ, ರಾತ್ರಿ ಏಕಾಏಕಿಯಾಗಿ ಬದಲಾವಣೆ ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

