ಶಾಸಕ ಹರೀಶ್ ಮತ್ತು ಪುತ್ರ ಹಾಗೂ ಆಪ್ತ ಸಹಾಯಕನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಹರಿಹರ ಕ್ಷೇತ್ರದ ಶಾಸಕ ಬಿ.ಪಿ.ಹರೀಶ್ ವಿರುದ್ಧ ಜಾತಿ ನಿಂದನೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಎಫ್​ಐಆರ್​ ದಾಖಲು ಮಾಡಿದೆ.

ಕೆರೆಯ ಮಣ್ಣು ಸಾಗಾಟ ಸಂಬಂಧ ರೈತರೊಬ್ಬರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ರೈತ ನೀಡಿದ ದೂರಿನ ಮೇರೆಗೆ ದಾವಣಗೆರೆಯ ಡಿಸಿಆರ್‌ಇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

ಕಳೆದ ಜನವರಿ-12 ರಂದು ಶಾಸಕ ಬಿ.ಪಿ.ಹರೀಶ್ ಅವರು ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಅರೋಪದ ಮೇಲೆ ದಾವಣಗೆರೆ ತಾಲೂಕಿನ ಕಾಡಜ್ಜಿ ಗ್ರಾಮಕ್ಕೆ ತೆರಳಿದ್ದರು.‌ ಅಲ್ಲಿ ಮಣ್ಣು ಸಾಗಾಟ ಮಾಡುವುದನ್ನು ನಿಲ್ಲಿಸುವಂತೆ ರೈತರಿಗೆ ಸೂಚಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ರೈತ ಹಾಗೂ ಬಿ.ಪಿ.ಹರೀಶ್ ನಡುವೆ ವಾಗ್ವಾದ ನಡೆದಿತ್ತು.‌
ಈ ಸಂದರ್ಭದಲ್ಲಿ ಶಾಸಕರು ಗ್ರಾಮದ ದಲಿತ ಸಮುದಾಯದ ಕಾಂತರಾಜ್ ಎಂಬವರಿಗೆ ಜಾತಿ ನಿಂದನೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ದೂರು:
ಕಲೆದ ಜನವರಿ
12ರಂದು ಕಾಡಜ್ಜಿ ಗ್ರಾಮದಲ್ಲಿ ಕೆರೆಯ ಮಣ್ಣನ್ನು ವ್ಯವಸಾಯಕ್ಕೆ ಬಳಸಲು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ, ಕಾರಿನಲ್ಲಿ ಸ್ಥಳಕ್ಕೆ ಬಂದ ಶಾಸಕರು ಟ್ರ್ಯಾಕ್ಟರ್ ಅಡ್ಡಗಟ್ಟಿದ್ದರು. ಆಗ ನಾನು ಟ್ರಾಕ್ಟರ್​​ನಿಂದ ಕೆಳಗಿಳಿದು ಕಾರಿನ ಬಳಿಗೆ ಹೋಗಿ ನೋಡಿದಾಗ, ಅದರಲ್ಲಿ ಶಾಸಕ ಬಿ.ಪಿ.ಹರೀಶ್​ ಇದ್ದರು.

- Advertisement - 

ಯಾಕೆ ಹರೀಶಣ್ಣ, ನನ್ನ ಟ್ರಾಕ್ಟರ್​​ಗೆ ಅಡ್ಡಗಟ್ಟಿದ್ದೀರಿ ಎಂದು ಕೇಳಿದ್ದಕ್ಕೆ, ಶಾಸಕರು, ಅವರ ಮಗ ಹಾಗೂ ಅವರ ಪಿ.ಎ ಅವರು ಕಾರಿನಿಂದ ಇಳಿದು ಬಂದು, ನಿನಗೆ ಗೊತ್ತಾಗುವುದಿಲ್ಲ, ಕೆರೆ ಮಣ್ಣನ್ನು ಯಾರನ್ನು ಕೇಳಿ ತುಂಬುವುದಕ್ಕೆ ಬಂದಿದ್ದಿ? ಅಂತಾ ಅವಾಚ್ಯವಾಗಿ ಬೈದರು. ಬೈಬೇಡಿ, ನಾವು ನಿಮಗೆ ಗೊತ್ತಿರುವವರು. ಯಾಕೆ ಬೈಯುತ್ತೀರಿ ಎಂದರೂ, ಶಾಸಕರು ಇನ್ನೂ ಜೋರಾಗಿ ಬೈಯುತ್ತಿದ್ದರು.

ಆಗ ನಮ್ಮ ಗ್ರಾಮದ ಕೆಲವರು ಬಂದಿದ್ದು, ಅವರ ಮುಂದೆಯೇ ಶಾಸಕರು, ಅವರ ಮಗ ಮತ್ತು ಅವರ ಪಿ.ಎ ಸೇರಿಕೊಂಡು ಮಣ್ಣು ತುಂಬಬೇಡ ಅಂತಾ ಹೇಳಿದರೂ ಸಹ ಮತ್ತೆ ಬೈದು ಜಾತಿ ನಿಂದನೆ ಮಾಡಿದರು. ಇದನ್ನು ಅರಿತು ಕೆರೆಯ ಬಳಿ ಇದ್ದ ಜನರು ಬಂದು ಗುಂಪು ಸೇರಿದರು. ನಂತರ ಊರಿನ ಗ್ರಾಮಸ್ಥರು, ಹಿರಿಯರು, ಮುಖಂಡರುಗಳು ಸೇರಿ ಎಲ್ಲರನ್ನೂ ಸಮಾಧಾನಪಡಿಸಿ ಕಳುಹಿಸಿದರು.

ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಬಿ.ಪಿ.ಹರೀಶ್​, ಅವರ ಮಗ ಹಾಗೂ ಅವರ ಪಿ.ಎ ಮೇಲೆ ಕಾನೂನು ಕ್ರಮ ಜರುಗಿಸಿ, ನನಗೆ ನ್ಯಾಯ ಕೊಡಿಸಬೇಕು ಎಂದು ರೈತ ಕಾಂತರಾಜ್​ ದೂರಿನಲ್ಲಿ ತಿಳಿಸಿದ್ದಾರೆ.
ಬಿ.ಪಿ.ಹರೀಶ್, ಪುತ್ರ ಹಾಗೂ ಆಪ್ತ ಸಹಾಯಕನ ವಿರುದ್ಧ 352 351(2), 126 (2), SC/ST PA ಆ್ಯಕ್ಟ್ 1986 ಅಡಿ ಪ್ರಕರಣ ದಾಖಲಾಗಿದೆ.

 

 

 

Share This Article
error: Content is protected !!
";