ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿರುವ ಇಟಲಿ ಹಾಗೂ ಜಪಾನ್ ದೇಶಗಳ ಕಾನ್ಸುಲೇಟ್ ಕಚೇರಿಗಳಿಗೆ ಅಪಚಿತರಿಂದ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಹಲಸೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.
ರಿಚ್ಮಂಡ್ ರಸ್ತೆಯಲ್ಲಿರುವ ಇಟಲಿ ಕಾನ್ಸುಲೇಟ್ ಕಚೇರಿಯ ಕಾನೂನು ವಿಭಾಗದ ಇ-ಮೇಲ್ ಐಡಿಗೆ ರಮೇಶ್ ಎಂಬ ಹೆಸರಿನ ವ್ಯಕ್ತಿ ಜ.30ರ ಬೆಳಗಿಜಾವ 5.25ಕ್ಕೆ ಕಳುಹಿಸಿದ್ದ ಹುಸಿ ಬಾಂಬ್ ಸಂದೇಶದಲ್ಲಿ ಮಧ್ಯಾಹ್ನ 1 ಗಂಟೆಗೆ ಐದು ಆರ್ ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ನಮೂದಿಸಿದ್ದ.
ಈ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹುಸಿ ಬಾಂಬ್ ಸಂದೇಶ ಎಂದು ತಿಳಿದು ಬಂದಿತ್ತು. ಕಚೇರಿಯ ಭದ್ರತಾ ವಿಭಾಗದ ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಪಾನ್ ಕಾನ್ಸುಲೇಟ್:
ಕಬ್ಬನ್ ರಸ್ತೆಯಲ್ಲಿರುವ ಜಪಾನ್ ಕಾನ್ಸುಲೇಟ್ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕೊಲೆ ಮಾಡುವುದಾಗಿ ಜ.30ರ ಬೆಳಗ್ಗೆ ವಿಘ್ನೇಶ್ ಹೆಸರಿನ ವ್ಯಕ್ತಿ ಎರಡು ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದ.
ಕೆಲವರು ಯಾರೋ ನಿಮ್ಮನ್ನು ಹತ್ಯೆ ಮಾಡಲಿದ್ದಾರೆ. ಈ ಕುರಿತು ಜಾಗರೂಕವಾಗಿರುವಂತೆ ಕರೆಯಲ್ಲಿ ತಿಳಿಸಿದ್ದಾನೆ. ಭದ್ರತಾ ವಿಭಾಗದ ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

