ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಜೀತ ಪದ್ಧತಿಯ ಹೊಸ ಸ್ವರೂಪಗಳನ್ನು ಗುರುತಿಸಿ, ಅವುಗಳನ್ನು ಹತ್ತಿಕ್ಕುವ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀತ ಪದ್ಧತಿ ನಿರ್ಮೂಲನಾ ಕಾಯಿದೆ-1976 ಜಾರಿಗೆ ಬಂದು 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಾಯ್ದೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಜೀತ ಪದ್ಧತಿಯು ‘ಆಧುನಿಕ ಗುಲಾಮಗಿರಿ’ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು.
ಹಿಂದಿನ ಕಾಲದಲ್ಲಿ ಕೃಷಿ ವಲಯ, ಇಟ್ಟಿಗೆ ಗೂಡುಗಳು ಮತ್ತು ಕೋಳಿ ಫಾರಂಗಳಲ್ಲಿ ಕಂಡುಬರುತ್ತಿದ್ದ ಸಾಂಪ್ರದಾಯಿಕ ಜೀತ ಪದ್ಧತಿ ಈಗ ಕಡಿಮೆಯಾಗಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಹಾಗೂ ‘ಗಿಗ್ ಎಕಾನಮಿ’ ವಲಯಗಳಲ್ಲಿ ಹೊಸ ಮಾದರಿಯ ಶೋಷಣೆ ಶುರುವಾಗಿದೆ ಎಂದರು.
ಹಲವು ಸರ್ವಿಸ್ ಪ್ರೋವೈಡರ್ ಕಂಪನಿಗಳು ಮತ್ತು ಡಿಜಿಟಲ್ ಸಂಸ್ಥೆಗಳು ಉದ್ಯೋಗಿಗಳಿಗೆ ಸಾಲದ ರೂಪದಲ್ಲಿ ಹಣ ನೀಡಿ, ಆ ನೆಪದಲ್ಲಿ ಅವರನ್ನು ದೀರ್ಘಕಾಲದವರೆಗೆ ಕೆಲಸಕ್ಕೆ ಕಟ್ಟುಬೀಳುವಂತೆ ಮಾಡುತ್ತಿವೆ. ಸಾಲ ತೀರಿಸುವ ನೆಪದಲ್ಲಿ ಉದ್ಯೋಗಿಗಳನ್ನು ಕಷ್ಟಕ್ಕೆ ದೂಡುವುದು ಆಧುನಿಕ ಜೀತ ಪದ್ಧತಿಯ ಭಾಗ ಎಂದು ಅಭಿಪ್ರಾಯಪಟ್ಟ ಅವರು, ಈ ಬದಲಾದ ಸನ್ನಿವೇಶ ಎದುರಿಸಲು ಕಾರ್ಮಿಕ ಇಲಾಖೆಯು ತನ್ನ ಕಾರ್ಯವೈಖರಿ ಬದಲಿಸಿಕೊಳ್ಳಬೇಕಿದೆ. ಕೇವಲ ಹಳೆಯ ಪದ್ಧತಿಯ ಮೇಲೆ ನಿಗಾ ಇಡುವುದರ ಜೊತೆಗೆ, ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೇಲೂ ಕಣ್ಗಾವಲು ಇಡಬೇಕು. ಅಧಿಕಾರಿಗಳಿಗೆ ತಾಂತ್ರಿಕ ತರಬೇತಿ ನೀಡಿ, ಈ ‘ಮಾಡ್ರನ್ ಸ್ಲೇವರಿ’ಯನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡಲು ಇಲಾಖೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜೀತ ಪದ್ಧತಿಯು ಯಾವುದೇ ಪ್ರತಿಫಲವಿಲ್ಲದೇ ದುಡಿಸಿಕೊಳ್ಳುವ ಒಂದು ಅನಿಷ್ಟ ಪದ್ಧತಿಯಾಗಿದೆ. ಈ ಹಿಂದೆ ಇದ್ದ ಜೀತ ಪದ್ಧತಿಯ ಸ್ವರೂಪ ಈಗ ಬದಲಾಗಿದ್ದು, ಇಂದಿನ ದಿನಗಳಲ್ಲಿ ಹೊಸ ರೂಪದಲ್ಲಿ ಶೋಷಣೆ ನಡೆಯುತ್ತಿದೆ ಎಂದು ತಿಳಿಸಿದ ಅವರು, ಈ ಅನಿಷ್ಟ ಪದ್ಧತಿಯನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕಿದೆ. ಪ್ರತಿಯೊಬ್ಬ ಶ್ರಮಿಕ, ಕಾರ್ಮಿಕ ಮತ್ತು ರೈತರು ಸುರಿಸುವ ಬೆವರಿನ ಹನಿಗೂ ತಕ್ಕ ಪ್ರತಿಫಲ ಸಿಗಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವು ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಪ್ರಾರಂಭವಾಗಿ ಓನಕೆ ಓಬವ್ವ ವೃತ್ತ, ಮದಕರಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗದವಾಗಿ ಪುನಃ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ, ಮಾನವ ಸರಪಳಿ ನಿರ್ಮಿಸಿ, “ಜೀತ ಬಿಡಿಸಿ ಶಾಲೆಗೆ ಕಳುಹಿಸಿ”, “ನಿಲ್ಲಿಸಿ ನಿಲ್ಲಿಸಿ ಜೀತಪದ್ಧತಿ ಕೊನೆಗೊಳಿಸಿ”, “ಜೀತಮುಕ್ತ ಕರ್ನಾಟಕ ಸುಂದರ ಕರ್ನಾಟಕ”,
ಜೀತದಿಂದ ಮುಕ್ತಿ ಬದುಕಿಗೆ ಶಕ್ತಿ”, ಜೀತ ಆಧುನಿಕ ಕಾಲದ ಗುಲಾಮಿ ಪದ್ಧತಿ, ಇದಕ್ಕೆ ಬಡತನ, ಅನಕ್ಷರತೆ, ಅಸ್ಪøಶ್ಯತೆ ಕಾರಣ, “ಜೀತ ಪದ್ಧತಿ ತಡೆಗಟ್ಟಲು ಕೈಜೋಡಿಸಿ ಜೀತದಾಳುಗಳಿಗೆ ಮುಕ್ತಿ ನೀಡಿ”, “ಜೀತ ಪದ್ಧತಿ ಮಾನವ ಕುಲಕ್ಕೆ ಅಂಟಿದ ಶಾಪ ಬನ್ನಿ ಅದನ್ನು ಹೋಗಲಾಡಿಸಲು ಶ್ರಮಿಸೊಣ” ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಅಧಿಕಾರಿಗಳಿಗೆ, ನೌಕರರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.
ಜಾಥಾದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

