ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲಡಕು ಗ್ರಾಮದ ಗೇಟ್ ಬಳಿ ಡಿಸೆಂಬರ್-25ರ ಗುರುವಾರ ಬೆಳಗಿನ ಜಾವ 1.45ರ ಸಮಯದಲ್ಲಿ ಖಾಸಗಿ ಸೀಬರ್ಡ್ ಬಸ್ ಮತ್ತು ಲಾರಿ(ಕಂಟೈನರ್) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಸುಟ್ಟು ಕರಲಾಗಿದ್ದರೆ 13ಕ್ಕೂ ಹೆಚ್ಚಿನ ಪ್ರಯಾಣಿಕರು ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ.
ಸೀಬರ್ಡ್ ಸ್ಲೀಪರ್ ಕೋಚ್ ಬಸ್ಸಿಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಡೀಸೆಲ್ ಟ್ಯಾಂಕ್ ಒಡೆದು ಹೋಗಿ ಡೀಸೆಲ್ ಸೋರಿಕೆಯಿಂದಾಗಿ ಬಸ್ ಬೆಂಕಿಗೆ ಆಹುತಿಯಾಗಿ ಧಗಧಗನೇ ಹೊತ್ತಿ ಉರಿಯಲು ಪ್ರಾರಂಭಿಸಿದೆ.
ಗಾಢ ನಿದ್ರೆಯಲ್ಲಿದ್ದ 5 ಮಂದಿ ಬಸ್ಸಿನೊಳಗೆ ಎಚ್ಚರಗೊಳ್ಳುವಷ್ಟರಲ್ಲಿ ಅರ್ಧ ದೇಹ ಬೆಂದು ಹೋಗಿತ್ತು. ಸಾವಿನ ಜೊತೆ ಹೋರಾಟ ಮಾಡುತ್ತಿದ್ದ ಅವರ ಚೀರಾಟ ಬೆಂಕಿಯ ಕೆನ್ನಾಲಿಗೆಯೊಳಗೆ ಕ್ಷಣದಲ್ಲಿ ನಿಂತಿತು.
ನಿದ್ರೆ ಮಂಪರಿನಲ್ಲಿದ್ದ 25 ಪ್ರಯಾಣಿಕರಲ್ಲಿ ಕೆಲವರು ಬೆಂಕಿಯ ಕೆನ್ನಾಲಿಗೆ ಸೀಟಿಕೊಂಡು ಸುಟ್ಟಗಾಯಗಳೊಂದಿಗೆ ಹೊರ ಬಂದರೆ, ಬಸ್ಸಿನಿಂದ ಮೇಲೆದ್ದು ಹಾರಿ ಕೆಳಗೆ ಬಿದ್ದವರು ಕೈ ಕಾಲುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಬೆಂಗಳೂರಿನಿಂದ ಹೊರಟ ಸೀಬರ್ಡ್ ಖಾಸಗಿ ಬಸ್ ಚಿತ್ರದುರ್ಗ-ಶಿವಮೊಗ್ಗ- ಮಾರ್ಗವಾಗಿ ಗೋಕರ್ಣದತ್ತ ತೆರಳುತ್ತಿತ್ತು.
ಜಯರಾಯನ ರೂಪದಲ್ಲಿ ಬಂದು ಖಾಸಗಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ ಸಂಪೂರ್ಣವಾಗಿ ಬೆಂಕಿಗೀಡಾಗಿದ್ದು 5 ಪ್ರಯಾಣಿಕರು ಮತ್ತು ಕಂಟೈನರ್ ಲಾರಿ ಚಾಲಕ ಸೇರಿ 6 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮೃತರು-ಈ ದುರ್ಘಟನೆಯಲ್ಲಿ ತಾಯಿ ಬಿಂದು ಮತ್ತು 5 ವರ್ಷದ ಪುತ್ರಿ ಗ್ರೇಯಾ, ಎ.ಎಂ ನವ್ಯಾ, ಹೆಚ್.ಸಿ ಮಾನಸ, ರಶ್ಮಿ, ಕಂಟೈನರ್ ಲಾರಿ ಚಾಲಕ ಕುಲದೀಪ್ ಯಾದವ್ ಸಾವನ್ನಪ್ಪಿದ್ದಾರೆ.

ಅಪಘಾತಕ್ಕೆ ಏನು ಕಾರಣ:
ಕಂಟೈನರ್ ಲಾರಿ ಚಾಲಕನ ನಿರ್ಲಕ್ಷ್ಯ, ಅಜಾಗರೂಕ ಚಾಲನೆಯಿಂದಾಗಿ ಹೆದ್ದಾರಿ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ರಸ್ತೆ ದಾಟಿ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಬಸ್ನ ಡೀಸೆಲ್ ಟ್ಯಾಂಕ್ಗೆ ಬೆಂಕಿ ತಗುಲಿದ್ದು, ಬೆಂಕಿ ವೇಗವಾಗಿ ಹರಡಿದೆ.
ಬಲಿ ಪಶುಗಳು:
ಕಂಟೈನರ್ ಲಾರಿ ಚಾಲಕನ ಅಪರಾಧದಿಂದಾಗಿ ಅಮಾಯಕ ಪ್ರಯಾಣಿಕರು ಬಲಿಪಶುಗಳಾಗಿದ್ದಾರೆ. ಭವಿಷ್ಯದ ಹೊಸ ಹೊಸ ಕನಸುಗಳನ್ನು ಕಟ್ಟಿಕೊಳ್ಳಬೇಕಿದ್ದವರು ಸಾವಿನ ಮನೆ ಸೇರಿದ್ದಾರೆ. ಇವರನ್ನೇ ನೆಚ್ಚಿಕೊಂಡಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ.
ಪ್ರಯಾಣಿಕರ ವಿವರ:
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಬಸ್ಸಿನಲ್ಲಿ 29 ಮಂದಿ ಪ್ರಯಾಣಿಕರು, ಚಾಲಕ ಮತ್ತು ಬಸ್ಸಿನ ಸಿಬ್ಬಂದಿ 3 ಮಂದಿ ಸೇರಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು.
ಆ ಪ್ರಯಾಣಿಕರ ಪಟ್ಟಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಚಿತ್ರದುರ್ಗದ ಹಿರಿಯೂರು ಸಮೀಪದ ಗೊರ್ಲಡಕು ಗ್ರಾಮದಲ್ಲಿ ನಡೆದ ಭೀಕರ ಬಸ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ‘ಸೀಬರ್ಡ್‘ ಬಸ್ ನಂಬರ್ ಕೆಎ-01 ಎಇ-5217 ಬೆಂಕಿಗೆ ಆಹುತಿಯಾಗಿದೆ. ಸೀಬರ್ಡ್ ಟ್ರಾವೆಲ್ಸ್ ನ ಚಾರ್ಟ್ ಪ್ರಕಾರ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದವರ ಹೆಸರುಗಳು ಈ ಕೆಳಗಿನಂತಿವೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಸೀ ಬರ್ಡ್ ಲಾಂಜ್ನಿಂದ ರಾತ್ರಿ 8:25ಕ್ಕೆ ಬಸ್ ಹೊರಟಿದೆ. ಇಲ್ಲಿ ಒಟ್ಟು 7 ಜನ ಬಸ್ ಹತ್ತಿದ್ದಾರೆ.
ಪ್ರಯಾಣಿಕರ ಹೆಸರುಗಳು:
ಮಂಜುನಾಥ್, ಸಂಧ್ಯಾ ಹೆಚ್, ಶಶಾಂಕ್ ಹೆಚ್ ವಿ, ದಿಲೀಪ್, ಪ್ರತೀಶ್ವರನ್, ಬಿಂದು ವಿ ಮತ್ತು ಕವಿತಾ ಕೆ. ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿ ಮೂರು ಜನ ಬಸ್ ಹತ್ತಿದ್ದಾರೆ. ಅನಿರುದ್ಧ್ ಬ್ಯಾನರ್ಜಿ, ಅಮೃತಾ ಮತ್ತು ಇಶಾ ಇಲ್ಲಿಂದ ಪ್ರಯಾಣ ಆರಂಭಿಸಿದರು. ಇವರೆಲ್ಲರೂ ಸ್ಲೀಪರ್ ಬಸ್ನ ಅಪ್ಪರ್ ಬರ್ತ್ ಬುಕ್ ಮಾಡಿದರು.
ಮೆಜೆಸ್ಟಿಕ್ ಪಿಕಪ್ ಪಾಯಿಂಟ್ನಲ್ಲಿ ಸೂರಜ್, ಮಾನಸ, ಮಿಲನ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ, ಶಶಿಕಾಂತ್ ಎಂ, ವಿಜಯ್ ಭಂಡಾರಿ, ನವ್ಯ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ ಮತ್ತು ದೇವಿಕಾ ಎಚ್. ಈ 13 ಜನ ಬಸ್ ಏರಿದ್ದಾರೆ.
ಯಶವಂತಪುರದ ಗೋವರ್ಧನ್ ಥಿಯೇಟರ್ ಸಮೀಪದಲ್ಲಿ ಮೇಘರಾಜ್, ಮಸ್ರತುನ್ನಿಸಾ ಎಸ್ ಎನ್ ಮತ್ತು ಸೈಯದ್ ಜಮೀರ್ ಗೌಸ್ ಬಸ್ ಹತ್ತಿದ್ದಾರೆ. ಕೊನೆಯದಾಗಿ ಗೊರಗುಂಟೆಪಾಳ್ಯದಲ್ಲಿ ಗಗನಶ್ರೀ ಎಸ್, ರಶ್ಮಿ ಮಹಲೆ ಮತ್ತು ರಕ್ಷಿತಾ ಆರ್ ಬಸ್ ಹತ್ತಿದ್ದಾರೆ.
ಸೀಬರ್ಡ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 25 ಮಂದಿ ಪ್ರಯಾಣಿಕರು ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದೆ. ಇನ್ನುಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಮತ್ತು ಇಬ್ಬರು ಕುಮಟಾಗೆ ಹೋಗುತ್ತಿದ್ದರು. ವಿಧಿಯಾಟದ ಮುಂದೆ ಮೃತರ ಕನಸುಗಳು ಕಮರಿ ಹೋಗಿವೆ.
ಟ್ರಾಫಿಕ್ ಜಾಮ್:
ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ಮಧ್ಯ ಜರುಗಿದ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 48(4)ರಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು ಕಡೆಯಿಂದ ಚಿತ್ರದುರ್ಗದ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಕಿಲೋ ಮೀಟರ್ ಉದ್ದಕ್ಕೂ ಕ್ಯೂ ನಿಂತಿದ್ದು ಗುರುವಾರ ಮಧ್ಯಾಹ್ನ 3 ಗಂಟೆಯಾದರೂ ಟ್ರಾಫಿಕ್ ಜಾಮ್ ತಗ್ಗಿರಲಿಲ್ಲ. ಪೊಲೀಸರು ಟ್ರಾಫಿಕ್ ಒತ್ತಡ ಕಡಿಮೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಇದರ ಮಧ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲು ಟ್ರಾಫಿಕ್ ಜಾಮ್ ನಿಂದಾಗಿ ಪರದಾಡಿದ ಪ್ರಸಂಗವೂ ಜರುಗಿದೆ.
ಬದುಕುಳಿದವರ ವ್ಯಥೆ-ಕಥೆ:
ಹಿರಿಯೂರು ಬಳಿಯ ಗೊರ್ಲಡಕು ಸಮೀಪ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಸೀಬರ್ಡ್ ಬಸ್ ಗೆ ಲಾರಿ ಬಂದು ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಸಾವು ನೋವು ಸಂಭವಿಸಿ ಬಸ್ ಸುಟ್ಟು ಕರಕಲಾಗಿದೆ.
ದುರಂತದಲ್ಲಿ ಈವರೆಗೂ ಐವರ ಮೃತದೇಹಗಳು ಪತ್ತೆಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಒಟ್ಟು ಎಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ನಿಖರ ಮಾಹಿತಿ ಸಿಕ್ಕಿಲ್ಲ.
ದುರಂತದಲ್ಲಿ ಕೆಲವರು ಗ್ರೇಟ್ ಎಸ್ಕೇಪ್ ಆಗಿ ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ. ಒಬ್ಬೊಬ್ಬರದ್ದು ಒಂದೊಂದು ಕಥೆ ಕೇಳಿದ್ರೆ ಕರುಳು ಚುರುಕ್ ಎನ್ನುತ್ತೆ. ಕೆಲವರು ಬ್ಯಾಚ್ಯುಲರ್ ಪಾರ್ಟಿಗೆ ತೆರಳುತ್ತಿದ್ದ, ಇನ್ನು ಕೆಲವರು ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಆದರೆ ವಿಧಿ ಅವರನ್ನ ಬಲಿ ಪಡೆದುಕೊಂಡಿದೆ. ಘಟನೆ ಬಳಿಕ ಮೂವರು ನಾಪತ್ತೆಯಾಗಿದ್ದು, ಆ ಪೈಕಿ ಒಬ್ಬ ಮಾಹಿತಿ ಲಭ್ಯವಾಗಿದೆ. ಉಳಿದ ಇಬ್ಬರು ಯುವತಿಯರು ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಯುವತಿಯರ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಯುವತಿಯರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ, ತಮ್ಮ ಮಕ್ಕಳನ್ನು ಹುಡುಕುತ್ತಾ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ಗಳಾದ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯಾ ಹಾಗೂ ಚನ್ನರಾಯಪಟ್ಟಣದ ಮಾನಸ ಸೇರಿ ಮತ್ತೊಬ್ಬರು ನಾಪತ್ತೆಯಾಗಿದ್ದಾರೆ.
ಐಜಿಪಿ ಭೇಟಿ:
ಬಸ್ ಮತ್ತು ಕಂಟೈನರ್ ಲಾರಿ ಮಧ್ಯ ನಡೆದ ಭೀಕರ ಅಪಘಾತದ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಖಾಸಗಿ ಬಸ್ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದಿದ್ದರಿಂದ ಖಾಸಗಿ ಬಸ್ ಹೊತ್ತಿ ಉರಿಯುವ ಮುನ್ನ ಅದೇ ದಾರಿಯಲ್ಲಿ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳಿದ್ದ ಬಸ್ಗೂ ಡಿಕ್ಕಿ ಹೊಡೆದಿದೆ.
ಆದರೆ ಅದೃಷ್ಟವಶಾತ್ ಶಾಲಾ ಮಕ್ಕಳಿಗೆ ಏನು ಆಗಿಲ್ಲ. ಶಾಲಾ ಮಕ್ಕಳ ಬಸ್ ಚಾಲಕನೇ ಘಟನೆಯ ಪ್ರತ್ಯಕ್ಷದರ್ಶಿ ಎಂದು ಅವರು ತಿಳಿಸಿದರು.
ಉಳಿದಂತೆ ಗಾಯಾಳುಗಳ ಪೈಕಿ 12 ಹಿರಿಯೂರಿಗೆ, ಒಂಬತ್ತು ಜನ ಶಿರಾ ಹಾಗೂ ಮೂರು ಜನ ಗಾಯಾಳುಗಳನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ತಗುಲಿದ ಮೂವರು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಬೆಂಕಿ ತಗುಲಿ ಗಾಯಗೊಂಡವರನ್ನು ಹೊರತುಪಡಿಸಿದರೆ ಅದೃಷ್ಟವಶಾತ್ ಉಳಿದವರ ಜೀವಕ್ಕೆ ಅಪಾಯ ಇಲ್ಲ. ಒಟ್ಟು 32 ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ 6 ಜನ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಇನ್ನಷ್ಟು ಮಾಹಿತಿ ತಿಳಿಯಬೇಕಿದೆ ಎಂದು ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಶಿವಕುಮಾರ್, ರೂರಲ್ ಇನ್ಸ್ಪೆಕ್ಟರ್ ಆನಂದ್, ಇನ್ಸ್ಪೆಕ್ಟರ್ ಗುಂಡಪ್ಪ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದಾರೆ.
ಸಂತಾಪ:
ಸ್ಲೀಪರ್ ಬಸ್ ಮತ್ತು ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು 6 ಮಂದಿ ಸಜೀವ ದಹನವಾದವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ 50,000 ಪರಿಹಾರ ಘೋಷಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರದಿಂದ ಮೃತ ಕುಟುಂಬಗಳಿಗೆ ತಲಾ 5 ಲಕ್ಷ, ಗಾಯಾಳು ಕುಟುಂಬಗಳಿಗೆ ತಲಾ 50 ಸಾವಿರ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಿಎಂ ಸಂತಾಪ:
ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು.
ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಆಗುವೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಸಂತಾಪ:
ಚಿತ್ರದುರ್ಗದ ಸಮೀಪ ಖಾಸಗಿ ಬಸ್ʼವೊಂದು ಅಪಘಾತಕ್ಕೆ ತುತ್ತಾಗಿ ಬೆಂಕಿ ಹೊತ್ತಿ ಉರಿದು ಹಲವರು ಧಾರುಣ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಈ ದುರಂತದಲ್ಲಿ ಇನ್ನೂ ಹೆಚ್ಚಿನ ಸಾವು-ನೋವು ಆಗದಿರಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ದುರಂತದಲ್ಲಿ ಜೀವ ಚೆಲ್ಲಿದವರಿಗೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಅವರ ಚಿಕಿತ್ಸೆಗೆ ರಾಜ್ಯ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಿ.
ಅಗಲಿದವರ ಕುಟುಂಬದವರಿಗೆ ಕುಮಾರಸ್ವಾಮಿ ಅವರು ತೀವ್ರ ಸಂತಾಪಗಳನ್ನು ತಿಳಿಸಿದ್ದಾರೆ.
ಅಲ್ಲದೆ ಖಾಸಗಿ ಬಸ್ ಗಳು ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಬಿಗಿ ಕಾನೂನು ಜಾರಿಗೆ ತರುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಡಿಸಿಎಂ ಶಿವಕುಮಾರ್ ಸಂತಾಪ:
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾರೈಸಿ ಇಂತಹ ದುರಂತಗಳು ಮರುಕಳಿಸದಿರಲಿ ಎಂದು ತಿಳಿಸಿದ್ದಾರೆ.

