ವೃದ್ಧ ದಂಪತಿಗಳ ಹತ್ಯೆ ಮಾಡಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಪಡೆದ ಸಾಲ ಹಿಂದಿರುಗಿಸುವಂತೆ ಕೇಳಿದ ಹಿನ್ನೆಲೆಯಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ದಾವಣಗೆರೆ 01ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಮಹತ್ವದ ಆದೇಶ ಮಾಡಿದೆ.

- Advertisement - 

ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ವೃದ್ಧ ದಂಪತಿ ಗುರುಸಿದ್ದಯ್ಯ ಮಠದ ಹಾಗೂ ಸರೋಜಮ್ಮ ಅವರನ್ನು ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಕುಮಾರ (38),‌ ಪರಶುರಾಮ (33) ಹಾಗೂ ಮರಿಸ್ವಾಮಿ (30) ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement - 

2025ರ ಜನವರಿ 25 ರಂದು ಎಲೇಬೇತೂರು ಗ್ರಾಮದಲ್ಲಿ ದಂಪತಿಯ ಕೊಲೆ ನಡೆದಿರುವ ಬಗ್ಗೆ ಮೃತರ ಪುತ್ರಿ ಜ್ಯೋತಿ ಎಂ.ಜಿ. ಎಂಬವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಏನಿದು ಪ್ರಕರಣ:
ಕೊಲೆಯಾಗಿರುವ ಗುರುಸಿದ್ದಯ್ಯ ಅವರು ಕಷ್ಟದಲ್ಲಿದ್ದವರಿಗೆ ಪ್ರಾಮಿಸರಿ ನೋಟ್ ಮೂಲಕ ಕೈಗಡ ಸಾಲ ಕೊಡುತ್ತಿದ್ದರು. ಪ್ರಮುಖ ಆರೋಪಿ ಕುಮಾರ ಕೂಡ ಇವರ ಬಳಿ
3 ಲಕ್ಷ ರೂ. ಸಾಲ ಪಡೆದಿದ್ದ. ಅದರಲ್ಲಿ, 2 ಲಕ್ಷ ರೂ. ಹಣ ವಾಪಸ್​ ನೀಡಿದ್ದ. ಆದರೆ, ಬಡ್ಡಿ ಸಮೇತ ಉಳಿದ 1 ಲಕ್ಷ ರೂ.ಗಳನ್ನು ಕೊಟ್ಟಿರಲಿಲ್ಲ. ಬಾಕಿ ಸಾಲ ಮತ್ತು ಬಡ್ಡಿ ಹಣವನ್ನು ಹಿಂತಿರುಗಿಸುವಂತೆ ಗುರುಸಿದ್ದಯ್ಯ ಕುಮಾರ್ ಗೆ ಒತ್ತಾಯಿಸುತ್ತಿದ್ದರು.

- Advertisement - 

ಹೀಗಾಗಿ, ಗುರುಸಿದ್ದಯ್ಯ ಹಾಗೂ ಸರೋಜಮ್ಮ ಅವರ ಕೊಲೆ ಮಾಡಲು ಅಪರಾಧಿ ಕುಮಾರ್ ಸಂಚು ರೂಪಿಸಿದ್ದ. ಅಲ್ಲದೆ, ಇಬ್ಬರನ್ನೂ ಕೊಲೆ ಮಾಡಿ, ಮನೆಯಲ್ಲಿರುವ ಹಣ ಮತ್ತು ಬಂಗಾರವನ್ನು ದೋಚಿದರೆ ಸಾಲ ತೀರಿಸಬಹುದು. ಜೊತೆಗೆ, ಶ್ರೀಮಂತನಾಗಬಹುದೆಂದು ಯೋಚನೆ ಮಾಡಿದ ಕುಮಾರ, ಇತರ ಆರೋಪಿಗಳಾದ ಪರಶುರಾಮ ಹಾಗೂ ಮರಿಸ್ವಾಮಿ ಜೊತೆ ಸೇರಿಕೊಂಡು ವೃದ್ಧ ದಂಪತಿಯ ಕತ್ತು ಕೊಯ್ದು, ಬರ್ಬರವಾಗಿ ಕೊಲೆ ಮಾಡಿದ್ದರು.

 ಈ ವೇಳೆ, ಮನೆಯಲ್ಲಿದ್ದ ಸುಮಾರು 7 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದರು.‌ ಈ ಬಗ್ಗೆ ತನಿಖೆ ಕೈಗೊಂಡಿದ್ದ ಗ್ರಾಮಾಂತರ ಪೊಲೀಸರು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

01ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಹೆಚ್. ಅಣ್ಣಯ್ಯನವರ್ ಅವರು ಪ್ರಕರಣದ ವಿಚಾರಣೆ ನಡೆಸಿದರು. ಕೊಲೆ ಆರೋಪ ಸಾಬೀತಾಗಿದ್ದರಿಂದ ಕುಮಾರ, ಪರಶುರಾಮ ಹಾಗೂ ಮರಿಸ್ವಾಮಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 35,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಮೃತರ ಕುಟುಂಬದ ಪರವಾಗಿ ಸರ್ಕಾರಿ ವಕೀಲರಾದ ಸತೀಶ್ ಕೆ.ಎಸ್. ವಾದ ಮಂಡಿಸಿದ್ದರು.

Share This Article
error: Content is protected !!
";