ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದತ್ತಾಂಶ ಸಂಗ್ರಹದ ಮೂಲಕ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗೂ ನ್ಯಾಯ ಕಲ್ಪಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇಟ್ಟಿರುವುದು ಸ್ವಾಗತರ್ಹ. ಆದರೆ, ಜಾತಿಗಣತಿ ಕಾರ್ಯದ ವೇಳೆ ಬಹಳಷ್ಟು ಸಮಸ್ಯೆಗಳು ಎದುರಾಗಿದ್ದು, ಇವುಗಳನ್ನು ತಕ್ಷಣ ಬಗೆಹರಿಸುವಂತೆ ಎಡ-ಬಲ ಮುಖಂಡರ ನಿಯೋಗ ಒತ್ತಾಯಿಸಿದೆ.
ನ್ಯಾ.ನಾಗಮೋಹನ್ ದಾಸ್ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಶುಕ್ರವಾರ ಸಂಜೆ ಭೇಟಿ ಮಾಡಿದ ಮಾದಿಗ-ಛಲವಾದಿ ಮುಖಂಡರ ನಿಯೋಗ, ಜಾತಿಸಮೀಕ್ಷೆ ವೇಳೆ ಎದುರಾಗಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ತಕ್ಷಣ ಪರಿಹರಿಸುವಂತೆ ಕೋರಿದರು.
ಒಳಮೀಸಲಾತಿ ಶೀಘ್ರ ಜಾರಿಗೊಳಿಸಬೇಕೆಂಬ ಸರ್ಕಾರದ ಕಾಳಜಿ, ಬದ್ಧತೆ ಸರಿಯಿದೆ. ಆದರೆ, ಜಾತಿಸಮೀಕ್ಷೆ ಕಾರ್ಯಕ್ಕೆ ಗಣತಿದಾರರಿಗೆ ಕೇವಲ 3 ಗಂಟೆ ತರಬೇತಿ ನೀಡಿರುವುದು ಬಹಳಷ್ಟು ಲೋಪಗಳಿಗೆ ಕಾರಣವಾಗಿದೆ. ಆದ್ದರಿಂದ ಅವರಿಗೆ ಒಂದು ದಿನದ ಮಟ್ಟಿಗೆ ಸಮಗ್ರ ಮಾಹಿತಿ ನೀಡುವ ತರಬೇತಿ ಆಯೋಜಿಸಬೇಕು.
ನೆಟ್‍ವಕ್, ಸರ್ವರ್ ಸಮಸ್ಯೆ ಪರಿಹರಿಸಲು ಹೋಬಳಿಗೊಬ್ಬರಂತೆ ಟೆಕ್ನಿಷನ್ ನೇಮಿಸಬೇಕು. ಪರಿಶಿಷ್ಟ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ, ಜಾತಿಗಣತಿಯಲ್ಲಿನ ಪ್ರಶ್ನಾವಳಿಗಳಿಗೆ ಮಾಹಿತಿ ನೀಡಲು ತಡವರಿಸುತ್ತಿದ್ದಾರೆ. ಆದ್ದರಿಂದ ಪ್ರಶ್ನೇಗಳನ್ನು ಸರಳಗೊಳಿಸಬೇಕು.
ರೇಷನ್ ಕಾರ್ಡ್‍ನಲ್ಲಿ ಸೊಸೆ ಹಾಗೂ ಚಿಕ್ಕ ಮಕ್ಕಳ ಹೆಸರು ಇಲ್ಲವೆಂದು ನೋಂದಣಿ ಮಾಡಿಕೊಳ್ಳುತ್ತಿಲ್ಲ. ಇದು ತಪ್ಪು ನಡೆ ಆಗಿದ್ದು, ಹೊಸದಾಗಿ ಮದುವೆ ಆಗಿಬಂದ ಸೊಸೆ, ಆಗತಾನೇ ಹುಟ್ಟಿದ ಮಕ್ಕಳ ಮಾಹಿತಿ ದಾಖಲಿಸಿಕೊಳ್ಳಲು ಯಾವುದೇ ದಾಖಲೆ ಕೇಳಬಾರದು. ಈ ನಿಟ್ಟಿನಲ್ಲಿ ಆದೇಶಿಸಬೇಕು.
ಬಹಳಷ್ಟು ಗಣತಿದಾರರ ಬಳಿ ಗುಣಮಟ್ಟದ ಮೊಬೈಲ್‍ಗಳು ಇಲ್ಲದ ಕಾರಣ ಜಾತಿಗಣತಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಲು ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಲು ತಕ್ಷಣ ಕ್ರಮಕೈಗೊಳ್ಳಬೇಕು.
ಜಾತಿಗಣತಿ ಕಾರ್ಯ ಪಾರದರ್ಶಕ, ನ್ಯಾಯಸಮ್ಮತವಾಗಿರಬೇಕು. ಅದರೆ, ಕೆಲವೆಡೆ ಗೊತ್ತಿದ್ದು ತಪ್ಪು ಮಾಹಿತಿ ನೋಂದಾಯಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದ್ದರಿಂದ ತಪ್ಪು ಮಾಹಿತಿ ನೋಂದಾಯಿಸಿಕೊಳ್ಳುವ ಗಣತಿದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಬೇಕು.
ಪರಿಶಿಷ್ಟ ಜಾತಿಯಲ್ಲಿರುವ ಬೇಡಜಂಗಮ, ಬುಡ್ಗಜಂಗಮ ಹೆಸರಿನಲ್ಲಿ ಲಿಂಗಾಯಿತ ಸಮಾಜದ ಗುರುಸ್ಥಾನದಲ್ಲಿರುವ ವೀರಶೈವರು, ನಾವು ಬೇಡಜಂಗಮರೆಂದು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಸುಳ್ಳು ಹೇಳಿ ನೋಂದಾಯಿಸಿಕೊಂಡವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿತು.
ಗಣತಿ ಕಾರ್ಯದಲ್ಲಿ ಶಿಕ್ಷಕರು ಹಾಗೂ ಇತರೆ ಎಲ್ಲ ಸಿಬ್ಬಂದಿಗೆ ಅಗತ್ಯ ಪರಿಕರಗಳನ್ನು ನೀಡಬೇಕು. ಬಿಸಿಲು ಹೆಚ್ಚಿರುವ ಕಾರಣಕ್ಕೆ ಅವರಿಗೆ ಟೋಪಿ ಸೇರಿ ಎಲ್ಲ ಅಗತ್ಯ ಸಾಮಾಗ್ರಿಗಳನ್ನು ತುರ್ತಾಗಿ ಓದಗಿಸಬೇಕು. ಜೊತೆಗೆ ಅವರಿಗೆ ಈ ಕಾರ್ಯ ಕೈಗೊಂಡ ಕಾರಣಕ್ಕೆ ನೀಡುವ ಗೌರವಧನವನ್ನು ವಿಳಂಬ ಮಾಡದೆ ಬಿಡುಗಡೆಗೊಳಿಸಬೇಕು.
ಹೀಗೆ ಅನೇಕ ವಿಷಯಗಳ ಕುರಿತು ನ್ಯಾ.ನಾಗಮೋಹನ್ ದಾಸ್ ಜೊತೆಗೆ ಚರ್ಚಿಸಿದ ಎಡ-ಬಲ ಮುಖಂಡರ ನಿಯೋಗ, ಜಾತಿಗಣತಿ ಕಾರ್ಯ ಪಾರದರ್ಶಕವಾಗಿ ನಡೆಬೇಕು. ಮುಖ್ಯವಾಗಿ ಈಗ ಎದುರಾಗಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿರುವ ಅನೇಕರು ಈಗಾಗಲೇ ಮೇಲಾಧಿಕಾರಿಗಳಿಗೆ ಈ ಸಂಬಂಧ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವುದು ಸುಲಭ. ಆದರೆ, ಈ ವಿಷಯದಲ್ಲಿ ವಿಳಂಬ ಆಗಬಾರದು ಎಂದು ತಿಳಿಸಿದರು.
ನಿಯೋಗದಲ್ಲಿದ್ದ ಎಡ-ಬಲ ಮುಖಂಡರ ಮಾತುಗಳನ್ನು ಆಲಿಸಿದ ನ್ಯಾ.ನಾಗಮೋಹನ್ ದಾಸ್ ಅವರು, ನಿಮ್ಮ ಹಾಗೂ ಈಗಾಗಲೇ ನಮಗೆ ತಲುಪಿರುವ ದೂರುಗಳು, ಸಂಶಯಗಳ ಕುರಿತು ಅವಲೋಕಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ಹೆಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ, ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಕೆಪಿಎಸ್‍ಸಿ ಮಾಜಿ ಸದಸ್ಯ ದಾಸಯ್ಯ, ಮುತ್ತುರಾಜ್, ಅಮರನಾಥ ಮಳವಳ್ಳಿ ಇತರರು ನಿಯೋಗದಲ್ಲಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೊಳಿಸಲು ಉತ್ಸಾಹಕರಾಗಿದ್ದಾರೆ. ಜೊತೆಗೆ ಪರಿಶಿಷ್ಟ ಸಮುದಾಯದಲ್ಲಿನ ಯಾವುದೇ ಜಾತಿಗೂ ಅನ್ಯಾಯ ಆಗದ ರೀತಿ ಮೀಸಲಾತಿ ಹಂಚಿಕೆ ಮಾಡಬೇಕೆಂಬ ಕಾಳಜಿ ಹೊಂದಿದ್ದಾರೆ. ಅವರ ಸೂಚನೆ ಮೇರೆಗೆ ನಡೆಯುತ್ತಿರುವ ಜಾತಿಗಣತಿ ಪಾರದರ್ಶಕವಾಗಿರಬೇಕು. ಈ ನಿಟ್ಟಿನಲ್ಲಿ ಆಯೋಗದ ಜವಾಬ್ದಾರಿ ಹೆಚ್ಚು ಇದೆ”. ಹೆಚ್. ಆಂಜನೇಯ, ಮಾಜಿ ಸಚಿವರು.