ಕಾನೂನು ಸುವ್ಯವಸ್ಥೆ ಕುಸಿತ, ಅಮಿತ್ ಶಾ ಭೇಟಿ ಮಾಡಿದ ನಿಯೋಗ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವದೆಹಲಿಯಲ್ಲಿ ಪಕ್ಷದ ಪ್ರಮುಖರ ನಿಯೋಗದೊಂದಿಗೆ
 ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವ ಕುರಿತು ವಿವರಣೆ ಸಲ್ಲಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.

ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಷಡ್ಯಂತರವೂ ಸೇರಿದಂತೆ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಮಾಹಿತಿ ಒದಗಿಸಲಾಯಿತು.

- Advertisement - 

ಕರ್ನಾಟಕದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಮಾಜ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವಿಸಿದೆ, ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ ಕಗ್ಗೊಲೆಗಳು ಮರುಕಳಿಸುತ್ತಿವೆ. ಸುಹಾಸ್ ಶೆಟ್ಟಿ ಕೊಲೆ, ಕೊಪ್ಪಳದ ಪರಿಶಿಷ್ಟ ಪಂಗಡದ ಗವಿಸಿದ್ದಪ್ಪ ನಾಯಕನ ಕೊಲೆ, ಮೇಲಿಂದ ಮೇಲೆ ಘಟಿಸುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆಗಳು ಕರ್ನಾಟಕದ ಜನರ ನೆಮ್ಮದಿ ಕಳೆಯುತ್ತಿದೆ. ಮತಾಂಧ ಶಕ್ತಿಗಳ ಅಟ್ಟಹಾಸ ಮೇರೆ ಮೀರುತ್ತಿದೆ, ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆದರೂ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಕೂರಿಸಿ ಕಾನೂನು ಸುವ್ಯವಸ್ಥೆಯನ್ನು ಪಾತಾಳಕ್ಕೆ ನೂಕಿದೆ ಎಂದು ಅವರು ಪರಿಸ್ಥಿತಿ ವಿವರಿಸಿದರು. 

ಹಿಂದೂ ಧಾರ್ಮಿಕ ಹಬ್ಬ, ಉತ್ಸವ, ಆಚರಣೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ಉದ್ಭವಿಸಿದೆ. ಗಣಪತಿ ಉತ್ಸವಗಳು ಸಡಗರದಿಂದ ನಡೆಯದಂತೆ ನಿರ್ಬಂಧಗಳನ್ನು ಹೇರಲಾಗಿದೆ. ನಿನ್ನೆ ಮಂಡ್ಯ ಜಿಲ್ಲೆಯ ಮದ್ದೂರಿನ ಗಣೇಶೋತ್ಸವದ ಮೇಲೆ ಮತಾಂಧ ದುಷ್ಕರ್ಮಿಗಳು ಕಲ್ಲು ತೂರಿ ದಾಂಧಲೆ ನಡೆಸಿದ್ದಾರೆ, ಮಹಿಳೆಯರು, ಮಕ್ಕಳು ಎನ್ನದೇ ಹಲ್ಲೆ ನಡೆಸಿದ್ದಾರೆ, ಪೊಲೀಸರ ಮೇಲೂ ಕಲ್ಲುತೂರಿ ಅಟ್ಟಹಾಸ ಮೆರೆದಿದ್ದಾರೆ.  ಇದನ್ನು ಪ್ರತಿಭಟಿಸಲು ಬೀದಿಗಿಳಿದ ಜನರ ಮೇಲೆ ನಿರ್ದಯವಾಗಿ ಪೊಲೀಸ್ ಲಾಠಿ ಪ್ರಹಾರ ನಡೆಸಿ, ನ್ಯಾಯ ಕೇಳಲು ಬಂದ ಜನರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿದೆ. 

- Advertisement - 

ಹುಬ್ಬಳ್ಳಿ, ಬೆಂಗಳೂರಿನಲ್ಲಿ ಈ ಹಿಂದೆ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಕೋಮುವಾದಿ ವಿದ್ವಂಸಕ ದುಷ್ಕರ್ಮಿಗಳ ಮೇಲೆ ಹೂಡಲಾಗಿದ್ದ ಪ್ರಕರಣಗಳನ್ನು ಬೇಷರತ್ತಾಗಿ ಸರ್ಕಾರ ಹಿಂತೆಗೆದುಕೊಂಡು ನಾಗರೀಕ ಸಮಾಜವನ್ನು ಆತಂಕಕ್ಕೆ ದೂಡಿದೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ದುಷ್ಕೃತ್ಯ ಎಸಗುವ ದುಷ್ಟಶಕ್ತಿಗಳಿಗೆ ಪರೋಕ್ಷವಾಗಿ ಕುಮಕ್ಕು ನೀಡುತ್ತಿದೆ. ಈ ಕುರಿತ ವಿವರಗಳನ್ನು ಮಾನ್ಯ ಗೃಹ ಸಚಿವರ ಅವಗಾಹನೆಗೆ ತರಲಾಯಿತು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಮರು ಸ್ಥಾಪಿಸುವಂತೆ ಕೇಂದ್ರ ಸರ್ಕಾರ ವಿಶೇಷ ನಿಗಾ ವಹಿಸುವಂತೆ ಕೋರಲಾಯಿತು.

ಇಂದಿನ ನಿಯೋಗದೊಂದಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿಧಾನಸಭಾ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್, ಶಾಸಕರಾದ ಎಸ್.ಆರ್ ವಿಶ್ವನಾಥ್, ಪರೀಶ್ ಪೂಂಜಾ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

 

 

Share This Article
error: Content is protected !!
";