ಸಿದ್ದಗಂಗಾ ಶಿವಕುಮಾರ ಶ್ರೀಗಳ ಜನ್ಮದಿನೋತ್ಸವಕ್ಕೆ ಬಂದಿದ್ದ ಭಕ್ತ ಸಾವು​

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ತುಮಕೂರು:
ನಡೆದಾಡುವ ದೇವರು, ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸವದ ಸಂಭ್ರಮದ ನಡುವೆಯೇ ಸಿದ್ದಗಂಗಾ ಮಠದಲ್ಲಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಶ್ರೀಗಳ ದರ್ಶನಕ್ಕೆಂದು ಮೈಸೂರಿನಿಂದ ಆಗಮಿಸಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮಠದ ಆವರಣದಲ್ಲೇ ಮೃತಪಟ್ಟಿದ್ದಾರೆ.

​ಘಟನೆಯ ವಿವರ:
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಾಯೂರು ನಿವಾಸಿ ನಟರಾಜು (60) ಮೃತಪಟ್ಟ ದುರ್ದೈವಿ. ಇವರು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು, ಶ್ರೀಗಳ ಮೇಲೆ ಅಪಾರ ಭಕ್ತಿ ಹೊಂದಿದ್ದರು. ಪ್ರತಿ ವರ್ಷ ತಪ್ಪದೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ನಟರಾಜು, ಈ ಬಾರಿಯೂ ತಮ್ಮ ಸ್ನೇಹಿತರೊಂದಿಗೆ ಮಾರ್ಚ್ 31ರ ರಾತ್ರಿ ಮಠಕ್ಕೆ ಬಂದಿದ್ದರು.

- Advertisement - 

​ ಏಪ್ರಿಲ್ 01 ಬೆಳಿಗ್ಗೆ ಶೌಚಾಲಯಕ್ಕೆ ಹೋಗಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ, ಶಿವಕುಮಾರ ಶ್ರೀಗಳ ಗದ್ದುಗೆಯ ಹಿಂಭಾಗದಲ್ಲಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅವರು ಅಲ್ಲಿಯೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

​ಹಳೆಯ ವಿದ್ಯಾರ್ಥಿಯ ಅಂತಿಮ ವಿದಾಯ:
ನಟರಾಜು ಅವರಿಗೆ ಇತ್ತೀಚೆಗಷ್ಟೇ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಯಾಗಿತ್ತು ಎಂದು ತಿಳಿದುಬಂದಿದೆ. ಅನಾರೋಗ್ಯದ ನಡುವೆಯೂ ಶ್ರೀಗಳ ಮೇಲಿನ ಭಕ್ತಿಯಿಂದ ಅವರು ಮಠಕ್ಕೆ ಆಗಮಿಸಿದ್ದರು. ತಾವು ವಿದ್ಯಾಭ್ಯಾಸ ಮಾಡಿದ, ತಮಗೆ ಅನ್ನ ನೀಡಿದ ಮಠದ ಆವರಣದಲ್ಲೇ ಅವರು ಅಸುನೀಗಿರುವುದು ಭಕ್ತ ವಲಯದಲ್ಲಿ ತೀವ್ರ ವಿಷಾದ ಮೂಡಿಸಿದೆ.

- Advertisement - 

​ವಿಷಯ ತಿಳಿಯುತ್ತಿದ್ದಂತೆಯೇ ಕ್ಯಾತಸಂದ್ರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
error: Content is protected !!
";