ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡುಕಂಡ ವರ್ಣರಂಜಿತ, ದೂರದೃಷ್ಟಿಯುಳ್ಳ ಅಪರೂಪದ ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ವಿಕಾಸಸೌಧ ಅವರದೇ ಕಲ್ಪನೆಯ ಕೊಡುಗೆ. ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಕಂದಾಯ ಇಲಾಖೆ (ಪಹಣಿ ಸೇರಿದಂತೆ)ದಾಖಲೆಗಳ ಕಂಪ್ಯೂಟರೀಕರಣ, ಐಟಿ, ಬಿಟಿ., ಮೆಟ್ರೋ, ಯಶಸ್ವಿನಿ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳು ಅವರ ಕೊಡುಗೆ.
ಸತತವಾಗಿ ಬರಗಾಲ, ನರಹಂತಕ ವೀರಪ್ಪನ್ ಡಾ.ರಾಜ್ ಅಪಹರಿಸಿದ್ದ ಪ್ರಕರಣ ಸೇರಿದಂತೆ ಹಲವು ವೈರುಧ್ಯಗಳ ನಡುವೆ ಉತ್ತಮ ಆಡಳಿತ ನೀಡಿದ ಎಸ್.ಎಂ.ಕೃಷ್ಣ ಅವರ ಬಗ್ಗೆ ಮೂರು ಘಟನೆಗಳ ಟಿಪ್ಪಣಿ ಇಲ್ಲಿದೆ.
ಘಟನೆ -1
ಅದು ತೊಂಬತ್ತರ ದಶಕ. ಬಾಗೂರು-ನವಿಲೆ ಚಳವಳಿ ನಡೆಯುತ್ತಿದ್ದ ಕಾಲಘಟ್ಟವದು. ಸಂತ್ರಸ್ತರ ಪರವಾಗಿ ನಾವು ನಿರಂತರವಾಗಿ ಚಳವಳಿಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಆಗಿನ ಶಾಸಕ ಡಾ.ಎನ್.ಬಿ. ನಂಜಪ್ಪ ಅವರು ಮಾತುಕತೆಗೆ ಕರೆದರು.
ನಮ್ಮನ್ನೆಲ್ಲ ಕರೆದು ನೀವು ಹೀಗೆ ಎಷ್ಟು ದಿನ ಹೋರಾಟ ಮಾಡುತ್ತೀರಿ? ನನ್ನ ಜೊತೆಗೆ ಬನ್ನಿ. ಬೆಂಗಳೂರಿನಲ್ಲಿ ಸರ್ಕಾರದ ಜೊತೆಗೆ ಮಾತನಾಡೋಣ ಎಂದರು. ಅವರ ಜೊತೆಗೆ ನಿಯೋಗ ಹೊರಟೆವು.
ಆಗ ಉಪ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿಸಿದರು. ಅವರನ್ನು ಅದೇ ಮೊದಲು ನೇರವಾಗಿ ಅತ್ಯಂತ ಸಮೀಪದಿಂದ ನೋಡಿದ್ದು. ನಮ್ಮನ್ನೆಲ್ಲ ಕೂರಿಸಿ ಏನು ಸಮಸ್ಯೆ? ಏಕೆ ಬಂದಿದ್ದೀರಿ? ಎಂದು ವಿನಯದಿಂದಲೇ ಕೇಳಿ ತಿಳಿದುಕೊಂಡರು.
ನಮಗೆ ಬಾಗೂರು-ನವಿಲೆ ಸುರಂಗ ಮಾಡಿದ ಸಂದರ್ಭದಿಂದ ಅಂತರ್ ಜಲ ಬತ್ತಿ ಹೋಗಿ ಕುಡಿಯುವ ನೀರಿಗೂ ಆಗಿರುವ ಹಾಹಾಕಾರದ ಬಗ್ಗೆ ತಿಳಿಸಿದೆವು. ಕೂಡಲೇ ಹಾಸನ ಜಿಲ್ಲಾಧಿಕಾರಿಗೆ ಮಾತನಾಡಿ ಆ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ವರದಿ ಕೊಡುವಂತೆ ಸೂಚಿಸಿದರು.
ಕಾಫಿ ಕುಡಿಯುವಾಗ ನಿಮ್ಮ ಹಾಸನದಲ್ಲಿ ಮಹಾನ್ ನಾಯಕರಿದ್ದಾರಲ್ಲಪ್ಪ? ನ್ಯಾಯ ಸಿಕ್ಕಿಲ್ಲವೇ? ಎಂದು ಕೇಳಿದರು. ಆ ಕ್ಷಣಕ್ಕೆ ಅದು ಅವರು ಹೆಸರಿಸಿದ ನಾಯಕ ದೇವೇಗೌಡರು ಎನ್ನುವುದು ನಮಗೆ ಅರಿವಾಗುವ ಮುನ್ನವೇ ಆಯ್ತು ಎಂದು ಹೇಳಿ ನಮ್ಮ ಮನವಿ ಪಡೆದು ಮುಂದೆ ಹೋದರು. ಅಷ್ಟೊಂದು ಸೂಕ್ಷ್ಮ ಮಾತು ಅವರದು.
ಆ ನಾಯಕರೇ ಎಸ್.ಎಂ.ಕೃಷ್ಣ ಅವರಿಗೆ ಕಾಡಿದ್ದು. ಈ ನಾಯಕರುಗಳ ಮುಂದಿನ ರಾಜಕೀಯ ಜಟಾಪಟಿ ಏನೇನಾಯಿತು ಎನ್ನುವುದು ಎಲ್ಲರಿಗೂ ಗೊತ್ತು. ಕೃಷ್ಣ ಅವರ ಪ್ರಭಾವ ತಗ್ಗಿಸಿ ಒಕ್ಕಲಿಗರ ಸಾಮ್ರಾಜ್ಯದ ಅಧಿಪತ್ಯ ಸ್ಥಾಪಿಸುವಲ್ಲಿ ಗೌಡರು, ಇವರಿಗಿಂತ ಒಂದೆಜ್ಜೆ ಮುಂದೆ ಹೋಗಿದ್ದು ಇತಿಹಾಸ. ಅದು 2004 ವಿಧಾನಸಭೆ ಚುನಾವಣೆಯಲ್ಲಿ ಸಾಭೀತಾಯಿತು.
ಘಟನೆ-2
ಸದಾ ಮಂದಸ್ಮಿತ ನಗು, ಮಿತವಾದ ಮಾತುಗಳಿಂದಲೇ ನಾಡಿನ ರಾಜಕಾರಣ ಅಷ್ಟೆ ಅಲ್ಲ ದೇಶದ ರಾಜಕಾರಣದಲ್ಲಿ ತನ್ನದೇ ಹೆಜ್ಜೆ ಗುರುತು ಛಾಪಿಸಿದ್ದ ವ್ಯಕ್ತಿತ್ವದ ಎಸ್.ಎಂ.ಕೃಷ್ಣ ಇನ್ನಿಲ್ಲ ಎನ್ನುವುದು ನೋವಿನ ಸಂಗತಿ. ತೊಂಬತ್ತೆರಡು ವರ್ಷ ತುಂಬಿದ ವ್ಯಕ್ತಿತ್ವ ಅವರದು.
ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಹುಟ್ಟಿ ಬೆಳೆದ ಕೃಷ್ಣ ಅವರು ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಹುದ್ದೆಗಳನ್ನು ಅಲಂಕರಿಸಿದವರು.
ಯಾಕೋ ಅವರಿಗೆ ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಅಲಂಕರಿಸುವ ಯೋಗವೂ ಬರಲಿಲ್ಲ. ಅಧಿಕಾರದ ಜೊತೆಗೆ ಸುದೀರ್ಘವಾಗಿ ಪಯಣಿಸಿದ ಅವರು ಎಂದೂ ವಿರೋಧ ಪಕ್ಷದ ನಾಯಕನಾಗುವ ಮನಸ್ಸು ಮಾಡಲಿಲ್ಲ. ಆದರೆ ದೇವೇಗೌಡರು ಇದಕ್ಕೆ ವಿಭಿನ್ನ. ವಿರೋಧ ಪಕ್ಷದಲ್ಲಿಯೇ ಸುಧೀರ್ಘವಾಗಿ ಪಯಣಿಸಿದ ದೇವೇಗೌಡರು ಪ್ರಧಾನಿಯಾದರೂ ಅಧಿಕಾರದಲ್ಲಿದ್ದದ್ದು ತೀರಾ ಕಡಿಮೆ. ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನದಲ್ಲಿದ್ದದ್ದು ಅಲ್ಪ ಅವಧಿಗೆ ಮಾತ್ರ.
ಎಸ್.ಎಂ.ಕೃಷ್ಣ ಅವರು ಇದಕ್ಕೆ ತದ್ವಿರುದ್ಧ. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಶಾಸಕರಾಗಿ ಕೆಲಸ ಮಾಡಿದವರು. ಹಾಗೆಯೇ ಲೋಕಸಭೆಯಲ್ಲಿ ಸಂಸದನಾಗಿ, ರಾಜ್ಯಸಭೆಯಲ್ಲಿಯೂ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಸಚಿವ, ಸ್ಪೀಕರ್ ಹುದ್ದೆಗಳಲ್ಲಿ ಅದಕ್ಕೊಂಡು ಘನತೆ ತುಂಬಿದವರು. ಮುಖ್ಯಮಂತ್ರಿಯಾಗಿ ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರ.
ಬಹುಶಃ ಎಸ್.ಎಂ.ಕೃಷ್ಣ ಅವರು ದೂರದೃಷ್ಟಿಯ ನಾಯಕನಾಗಿ ಕೆಲಸ ಮಾಡಿದೆ ಹೋಗಿದ್ದರೆ, ಬೆಂಗಳೂರು ಖಂಡಿತವಾಗಿ ಸಿಲಿಕಾನ್ ವ್ಯಾಲಿ ಎನ್ನುವ ಹೆಸರು ಗಳಿಸಲು ಸಾಧ್ಯವೇ ಆಗುತ್ತಿರಲಿಲ್ಲ.
ಐಟಿ, ಬಿಟಿಗೆ ಅವರು ನೀಡಿದ ಪ್ರೋತ್ಸಾಹದಾಯಕ ಯೋಜನೆಗಳನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಅದನ್ನು ಒಪ್ಪಿದ್ದಕ್ಕಿಂತ ಟೀಕಿಸಿದ್ದೆ ಹೆಚ್ಚು. ಆದರೆ ಇಂದು ನಾಡಿನ ಆದಾಯದಲ್ಲಿ ಅರ್ಧದಷ್ಟು ಬೆಂಗಳೂರಿನಿಂದಲೇ ಬರುತ್ತಿದೆ ಅಂದರೆ, ಅದರ ಹೆಚ್ಚಿನ ಕ್ರೆಡಿಟ್ ಎಸ್.ಎಂ.ಕೃಷ್ಣ ಅವರಿಗೂ ಕೊಡಬೇಕು.
ಘಟನೆ-3
ಎಸ್.ಎಂ.ಕೃಷ್ಣ ಅವರು ಆಗಷ್ಟೆ ತೊಂಬತ್ತು ವರ್ಷಕ್ಕೆ ಕಾಲಿಟ್ಟಿದ್ದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದಿಂದ ಪತ್ರಿಕಾ ದಿನಾಚರಣೆ ಮಾಡಬೇಕು ಎಂದು ನಿರ್ಧರಿಸಿದೆವು.
ಆಗ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿದ್ದ ಸದಾಶಿವ ಶೆಣೈ ಮತ್ತು ನಾವು ಒಟ್ಟಿಗೆ ಸೇರಿ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ದಿನಾಚರಣೆ ಆಯೋಜಿಸಿದೆವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆಗೆ ಬರಲು ಒಪ್ಪಿದರು. ಆಗ ವಿಶೇಷ ಅತಿಥಿಯಾಗಿ ನಾವು ಆಹ್ವಾನಿಸಲೇಬೇಕು ಎಂದು ನಿರ್ಧರಿಸಿ ಆಹ್ವಾನಿಸಿದ್ದು ಇದೇ ಎಸ್.ಎಂ.ಕೃಷ್ಣ ಅವರನ್ನು.
ನಮ್ಮ ಆಹ್ವಾನವನ್ನು ಒಪ್ಪಿ ಖುಷಿಯಿಂದ ಪ್ರೆಸ್ ಕ್ಲಬ್ ಗೆ ಬಂದರು. ಅಷ್ಟೆ ಅಲ್ಲ, ಒಂದಿಷ್ಟು ಹರಿಬಿರಿ ಮಾಡದೆ ಇಡೀ ಕಾರ್ಯಕ್ರಮದಲ್ಲಿ ಪೂರ್ಣ ಲವಲವಿಕೆಯಿಂದಲೇ ಭಾಗವಹಿಸಿದ್ದರು.
ಒಂಬತ್ತು ದಶಕಗಳನ್ನು ಕಂಡಿದ್ದ ಹಿರಿಯ ಮುತ್ಸದ್ದಿಗೆ ಅಂದು ಸನ್ಮಾನಿಸುವ ಭಾಗ್ಯ ನನ್ನದಾಗಿತ್ತು. ಅವರ ಜೊತೆಯಲ್ಲಿದ್ದ ಆ ಕ್ಷಣವನ್ನು ಮರೆಯಲಾಗದು. ಅಷ್ಟೆ ಪ್ರೀತಿಯಿಂದ ಮಾತನಾಡಿಸಿ, ನಮ್ಮ ಆತಿಥ್ಯ ಸವಿದು ಹೋಗಿದ್ದೆ ಕೊನೆಯ ಭೇಟಿಯಾಯಿತು. ಆಗ ಸನ್ಮಾನಿಸಿದ್ದೆ ಕೊನೆಯಯಿತು.
ಅತ್ಯಂತ ಹಿರಿಯರಾದರೂ, ಕಿರಿಯರ ಮಟ್ಟಕ್ಕೆ ತಗ್ಗಿ ಪ್ರೀತಿ ತೋರಿಸಿದ ಅವರ ವಿನಯವಂತಿಕೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಟಿಪ್ಪಣಿ:
ಪ್ಲೇವಿನ್ ಲಾಟರಿ, ಸಾರಾಯಿ ಪ್ರಕರಣ, ಕಂಬಾಳಪಲ್ಲಿ ದಲಿತರ ನರಮೇಧ, ವೀರಪ್ಪನ್ ಪ್ರಕರಣ, ಎಡಬಿಡದೆ ಕಾಡಿದ ಬರಗಾಲ, ಗ್ರಾಮೀಣ ಮಟ್ಟಕ್ಕೆ ಇಳಿಯದೆ ಹೈಟೆಕ್ ಕೃಷ್ಣರಾಗಿ ಆಡಳಿತ ನಡೆಸಿದ್ದು….ಇವೆಲ್ಲವೂ ಕೃಷ್ಣ ಅವರ ಆಡಳಿತದ ಮೈನಸ್ ಪಾಯಿಂಟ್.