ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿವಿಲ್ ಕಾಂಟ್ರಾಕ್ಟರ್ ಒಬ್ಬರು ಪರಿಚಿತ ಮಹಿಳೆ ಕರೆದಳೆಂದು ಅವಳ ಮನೆಗೆ ಹೋದರೆ, ಗುತ್ತಿಗೆದಾರರನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಹಿಳೆಯ ಮನೆಯಲ್ಲಿ ಸುಲಿಗೆಗೆ ಒಳಗಾಗಿದ್ದ 57 ವರ್ಷದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಸಂತೋಷ್, ಅಜಯ್ ಹಾಗೂ ಜಯರಾಜ್ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪರಿಚಯದ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ್ದ ಆರೋಪಿ ನಯನಾ ತಲೆ ಮರೆಸಿಕೊಂಡಿದ್ದು ಆಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿ ನಯನಾಳಿಗೆ ದೂರುದಾರ ವ್ಯಕ್ತಿ 5 – 6 ತಿಂಗಳಿಂದಷ್ಟೆ ಪರಿಚಯವಾಗಿದ್ದರು. ಆಗಾಗ ತನ್ನ ಮಗುವಿಗೆ ಹುಷಾರಿಲ್ಲವೆಂದು 4-5 ಸಾವಿರ ರೂ. ಹಣ ಪಡೆದುಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರ ವ್ಯಕ್ತಿ ಹೋಗಿರಲಿಲ್ಲ. ಡಿಸೆಂಬರ್-9 ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, ನಮ್ಮ ಮನೆ ಸಮೀಪದಲ್ಲಿಯೇ ಇದೆ, ಟೀ ಕುಡಿದು ಹೋಗುವಿರಂತೆ ಬನ್ನಿ ಎಂದು ಆಹ್ವಾನಿಸಿದ್ದಳು.
ಆಕೆಯ ಕೋರಿಕೆ ಮೇರೆಗೆ ದೂರುದಾರ ಅವಳ ಮನೆಗೆ ಹೋಗಿದ್ದರು. ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಬಂದ ಮೂವರು ಆರೋಪಿಗಳು ನಾವು ಕ್ರೈಮ್ ಪೊಲೀಸ್ ಸಿಬ್ಬಂದಿ, ನೀವು ವ್ಯಭಿಚಾರದಲ್ಲಿ ತೊಡಗಿದ್ದೀರಾ ಎನ್ನುತ್ತಾ ಬೆದರಿಸಿ ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಎರಡು ಲಕ್ಷ ಕೊಡದಿದ್ದರೆ ನಿಮ್ಮಿಬ್ಬರ ಅಕ್ರಮ ಸಂಬಂಧದ ಕುರಿತು ನಿನ್ನ ಪತ್ನಿಗೆ ಮಾಹಿತಿ ನೀಡುವುದಾಗಿ ಬೆದರಿಸಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರುದಾರ ಗುತ್ತಿಗೆದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ, 55 ಸಾವಿರ ನಗದು ಪಡೆದು ಸ್ಥಳದಿಂದ ತೆರಳಿದ್ದರು. ಆರೋಪಿಗಳೊಂದಿಗೆ ತಾನೂ ತೆರಳಿದ್ದ ನಯನಾಳ ಬಗ್ಗೆ ಅನುಮಾನಗೊಂಡ ಸಂತ್ರಸ್ತ ಗುತ್ತಿಗೆದಾರ ಪೊಲೀಸರಿಗೆ ದೂರು ಕೊಡೋಣ ಬಾ ಆಕೆಯನ್ನು ಕರೆದಿದ್ದನು. ಆದರೆ ದೂರು ಕೊಡಲು ಒಪ್ಪದೆ ಮಗುವಿನೊಂದಿಗೆ ನಿಮ್ಮ ಮನೆಗೆ ಬಂದು, ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯ ಎಂದು ಪತ್ನಿಗೆ ಹೇಳುವುದಾಗಿ ಆರೋಪಿ ನಯನಾ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಸಂತ್ರಸ್ತ ಗುತ್ತಿಗೆದಾರ ಉಲ್ಲೇಖಿಸಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಯನಾ ನಾಪತ್ತೆಯಾಗಿದ್ದು ಅವಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.