ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿಯನ್ನು ಅಪಹರಿಸಿ ರೇಪ್ ಮಾಡಿ ಕೊನೆಗೆ ಕೊಲೆ ಮಾಡಿದ್ದ ಹೃದಯವಿದ್ರಾವಕ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಘಟನೆ ನಡೆದು 5 ದಿನಗಳಾದರೂ, ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಅಪ್ರಾಪ್ತ ಬಾಲಕಿಗೆ ಆದ ಈ ಅನ್ಯಾಯಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಈವರೆಗೂ ಪರಿಹಾರವನ್ನೂ ನೀಡಿಲ್ಲ, ಕನಿಷ್ಠ ಪಕ್ಷ ಸೌಜನ್ಯಕ್ಕೂ ಅವರ ಆ ಹೆತ್ತ ತಂದೆ ತಾಯಿಯರನ್ನು ಭೇಟಿಯಾಗಿ ಸಾಂತ್ವನವನ್ನೂ ಹೇಳಿಲ್ಲ ಎಂದು ಅಶೋಕ್ ಹರಿಹಾಯ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ನಾವು ದಲಿತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಬೊಗಳೆ ಭಾಷಣ ಮಾಡುತ್ತೀರಲ್ಲ, ನಿಮ್ಮ ತವರು ಜಿಲ್ಲೆಯಲ್ಲಿ, ಮೈಸೂರಿನ ಹೃದಯ ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಆದ ಘೋರ ಅನ್ಯಾಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಒಂದು ಕಡೆ ಮೈಸೂರು ಜಿಲ್ಲೆಯನ್ನ ಸಂಪೂರ್ಣವಾಗಿ ನಿಮ್ಮ ಪುತ್ರನಿಗೆ ಬಿಟ್ಟುಕೊಟ್ಟು ವರ್ಗಾವಣೆ, ಕಮಿಷನ್ ದಂಧೆಯಲ್ಲಿ ತೊಡಗಿಸಿದ್ದೀರಿ. ಇನ್ನೊಂದು ಕಡೆ ತಾವು ಬೆಂಗಳೂರಿನಲ್ಲಿ ಡಿನ್ನರ್ ಮೀಟಿಂಗ್, ಕಲೆಕ್ಷನ್ ಟಾರ್ಗೆಟ್ ಮೀಟಿಂಗ್ ಎಂದು ಬಿಹಾರ ಚುನಾವಣೆಗೆ ಫಂಡಿಂಗ್ ಕಳುಹಿಸಲು ಪೈಪೋಟಿಗೆ ಬಿದ್ದಂತೆ ಸಚಿವರಿಗೆ ವಸೂಲಿ ಟಾರ್ಗೆಟ್ ನೀಡಿ ಅಕ್ಟೋಬರ್ ಕ್ರಾಂತಿಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದೀರಿ ಎಂದು ಅವರು ಆರೋಪಿಸಿದ್ದಾರೆ.
ಹೀಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯದೇ ಇನ್ನೇನಾಗುತ್ತೆ ಸ್ವಾಮಿ? ಒಬ್ಬ ದಲಿತ ಬಾಲಕಿಯ ಕೊಲೆಯ ರಕ್ತ ನಿಮ್ಮ ಕೈಗಂಟಿದೆ. ಈ ಪಾಪದ ಶಾಪ ನಿಮ್ಮನ್ನ ತಟ್ಟದೇ ಇರದು.
ತಾವು ದಲಿತರು, ಹಿಂದುಳಿದವರ ಚಾಂಪಿಯನ್ ಅಲ್ಲ. ತಾವು ದಲಿತರು, ಹಿಂದುಳಿದವರ ಮೋಸಗಾರ ಎಂದು ಟೀಕಾಪ್ರಹಾರ ಮಾಡಿದ್ದಾರೆ.

