ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಹಾಗೂ 1996-98ನೆಯ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಯಶಸ್ವಿಯಾಗಿ ನಡೆಯಿತು.
26 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಎನ್ ಡಿ ಕುಮಾರ್, ರವಿ ಎಚ್ ವಿ, ಅಕ್ಬರ್, ಪುಷ್ಪಾರಾಣಿಯವರ ನೇತೃತ್ವದಲ್ಲಿ ಒಂದು ಗುಂಪು ಮಾಡಿ ಸಂಕಲ್ಪಮಾಡಿದ್ದರು. ಪರಸ್ಪರ ಭೇಟಿಯಾಗಿ ತಮಗೆ ಕಲಿಸಿದ ಗುರುಗಳ ನೆನಪಿಸಿ ಕರೆದು ಗೌರವಿಸಿ, ಸನ್ಮಾನಿಸಿದರು.
ತಮ್ಮ ಸದ್ಯದ ಉದ್ಯೋಗ ಕೆಲಸಗಳನ್ನು ಗುರುಗಳೊಂದಿಗೆ ಹಂಚಿಕೊಂಡರು. ಹೊನ್ನಾರೆಡ್ಡಿ, ಬಣಕಾರ್, ಗೋಪಾಲ್, ವಿವೇಕಾನಂದ, ಮಂಜುನಾಥ್ ಉಪನ್ಯಾಸಕರು ವಿದ್ಯಾರ್ಥಿಗಳ ಈ ಸಮಯೋಚಿತ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಗುರುಶಿಷ್ಯರ ಅಪರೂಪದ ಮಾತುಕತೆಯ ನಡುವೆ ಹಾಡು, ತಮಾಷೆ, ಸ್ವಾರಸ್ಯಕರ ಪ್ರಸಂಗಗಳೂ ಬಂದುಹೋದವು. ನೆನಪು ಸಾವಿರ ನೆನಪಾಗಿ ಒಬ್ಬೊಬ್ಬರ ಪರಿಚಯದಲ್ಲಿ ಮೂಡಿಬಂದಿತು. ಹದಿನಾರನೆಯ ವಯಸ್ಸಿನಲ್ಲಿ ಕನಸುಕಂಗಳೊಂದಿಗೆ ಹೆಜ್ಜೆಯಿರಿಸಿದ್ದ ನೀವು ಈಗ ಜವಾಬ್ದಾರಿಯ ಹೊತ್ತಿರುವ ಭಾರತದ ಹೆಮ್ಮೆಯ ಪ್ರಜೆಗಳಾಗಿದ್ದೀರಿ ಅಂದರು ರಸಾಯನ ಶಾಸ್ತ್ರ ಉಪನ್ಯಾಸಕ ಗೋಪಾಲ್ ಅವರು.
ವೇದಿಕೆ ಕಾರ್ಯಕ್ರಮವನ್ನು ಹೊನ್ನಾರೆಡ್ಡಿ ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟನೆ ಮಾಡಿ ಗುರುಗಳ ನೆನಪಿಸಿಕೊಳ್ಳುವ ಸಂಪ್ರದಾಯ ಅಪರೂಪವಾದದ್ದು ಅಗತ್ಯವಾದದ್ದು ಎಂದರು.
ಹಾಲಿ ಪ್ರಾಂಶುಪಾಲರ ನುಡಿಗಳನ್ನು ಓದಲಾಯಿತು. ವಿವೇಕಾನಂದ ಹೆತ್ತವರ ಚೆನ್ನಾಗಿ ನೋಡಿಕೊಳ್ಳಿ ಮಾದರಿಯಾಗಿ ಎಂದು ಸಲಹೆ ನೀಡಿದರು.
ಸೀತಣ್ಣ ಹಾಡನ್ನು ಹಾಡಿ ಲವಲವಿಕೆಯಲ್ಲಿ ಎಲ್ಲರನ್ನೂ ಆಶೀರ್ವದಿಸಿದರು. ಮಂಜುನಾಥ ತಮ್ಮ ಹಿರಿಯ ಸಹೋದ್ಯೋಗಿಗಳನ್ನು ಮೆಚ್ಚುತ್ತಲೇ ನಮ್ಮ ಮುಂದಿನ ನಡೆ ಆರೋಗ್ಯಕರವಾಗಿರಲಿ ಪ್ರಬುದ್ಧವಾಗಿರಲಿ ಎಂದರು.
ಪುಷ್ಪರಾಣಿ ನಿರೂಪಿಸಿದರು. ಎನ್ ಡಿ ಕುಮಾರ್ ಪ್ರಾಸ್ತಾವಿಕ ನುಡಿದರು. ತಿಪ್ಪೇಸ್ವಾಮಿ ವಂದಿಸಿದರು. ಅಕ್ಬರ್ ಸನ್ಮಾನ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಎರಡೂವರೆ ದಶಕದ ನಂತರ ಭೇಟಿಯಾದವರೂ ದೂರದೂರಿನಿಂದ ಬಂದ ಸ್ನೇಹಿತರ ಮಾತು ಹರಟೆ ತರಲೆ ನಡೆದೇ ಇತ್ತು.
90ರ ದಶಕದ ಹಾಡು ಸಿನಿಮಾ ಸಾಹಿತ್ಯ ಮೆಲುಕು ಹಾಕಲಾಯಿತು. ತರಗತಿ ಕೋಣೆ ಹೊಕ್ಕು ಕೂತಲ್ಲೇ ಕೂತು ಕಾಲಘಟ್ಟದಲ್ಲಿ ಹಿಂದೆ ಪ್ರಯಾಣಿಸಿ ಬಂದಂತಾಯಿತು. ನಂತರ ಸ್ನೇಹಿತರೆಲ್ಲ ಜೋಗಿಮಟ್ಟಿ ಗಿರಿಧಾಮಕ್ಕೆ ಊಟ, ಆಟ, ಹಾಡು, ಅನುಭವ ಹಂಚಿಕೆ ಮುಂತಾದ ಚಟುವಟಿಕೆಗಳಿಗಾಗಿ ತೆರಳಿದರು.