ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ):
ಹಂಪಿ ಉತ್ಸವದ ಅಂತಿಮ ದಿನವಾದ ಭಾನುವಾರ ಸಂಜೆ ವಿಜಯನಗರ ಸಾಮ್ರಾಜ್ಯದ ಕಲಾ ವೈಭವ ಮರುಕಳಿಸುವ ಸಾಂಸ್ಕೃತಿಕ ಸೊಬಗಿನ ಜಾನಪದ ಕಲಾ ತಂಡಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ ಭುವನೇಶ್ವರ ದೇವಿಗೆ ಪೂಜೆ ನೆರವೇರಿಸುವುದರ ಮೂಲಕ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ ಸೇರಿದಂತೆ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ:
ಜಾನಪದ ಕಲಾ ತಂಡಗಳ ಮೆರವಣಿಗೆ ನಾಡಿನ ಗ್ರಾಮೀಣ ಭಾಗದ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವ ಅಂತಿಮ ದಿನದ ಮೆರಗು ಹೆಚ್ಚಿಸಿದವು. ಜಾನಪದ ಕಲಾ ಸೊಬಗಿನೊಂದಿಗೆ ಮುಂದೆ ಹಂಪಿಯ ಗಜ ಲಕ್ಷ್ಮೀ ಸಾಗುತ್ತಿದಂತೆ ಹಿಂದೆ ತಾಯಿಭುವನೇಶ್ವರಿ ದೇವಿಯ ಉತ್ಸವದ ಮೂರ್ತಿ ಹೊತ್ತ ಟ್ರಾಕ್ಟರ್ ಸಾಗಿತು. ಮೆರವಣಿಗೆಯ ಉತ್ಸವಕ್ಕೆ ಆಗಮಿಸಿದ್ದ ಜನತೆಯು ಆಕರ್ಷಣೆಗೆ ಕಾರಣವಾಯಿತು. ವಿದೇಶಿ ಪ್ರವಾಸಿಗರು ಸಹ ಜಾನಪದ ಕಲೆಗಳಿಗೆ ಮನಸೋತು ವಿಡಿಯೋ, ಪೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಗಮನ ಸೆಳೆದ ಜಾನಪದ ಕಲಾತಂಡಗಳ ಮೆರವಣಿಗೆ:
ಮೆರವಣಿಗೆಯಲ್ಲಿ ಜಾನಪದ ಕಲಾ ಪ್ರಕಾರಗಳು, ಕಲಾತಂಡಗಳು ನೋಡುಗರ ಗಮನ ಸೆಳೆದವು.
ತಾಷಾರಂಡೋಲ್, ಹಲಗೆವಾದನ, ವೀರಗಾಸೆ, ನಾದಸ್ವರ, ಹಗಲುವೇಷ, ಸಿಂಧೋಳ್ ಕುಣಿತ, ನಂದಿಧ್ವಜ, ಕಹಳೆ ವಾದನ, ಮರಗಾಲು ಕುಣಿತ, ಗೊಂಬೆ ಕುಣಿತ, ಹಕ್ಕಿಪಿಕ್ಕಿ ನೃತ್ಯ, ಕರಡಿ ಮೇಳ, ಪುರವಂತಿಕೆ, ಪೂಜಾ ಕುಣಿತ, ಬೊಂಬೆ ನೃತ್ಯ, ಚಿಲಿಪಿಲಿ ಗೊಂಬೆ, ಸಮಾಳವಾದನ, ಮಹಿಳಾ ನಗಾರಿ, ಲಂಬಾಣಿ ವೃತ್ತ, ಮಹಿಳಾ ಪಟಕುಣಿತ, ಕೊಡವ ನೃತ್ಯ, ಕೋಳಿ ನೃತ್ಯ, ನಗಾರಿ, ಕಂಸಾಳೆ, ಚಂಡೆವಾದ್ಯ, ಸೋಮನ ಕುಣಿತ, ಮಹಿಳಾ ಡೊಳ್ಳುಕುಣಿತ, ಯಕ್ಷಗಾನ, ಹುಲಿವೇಷ, ಗಾರುಡಿಗೊಂಬೆ, ಪಾತರಗಿತ್ತಿ ನೃತ್ಯ, ಗೊರವರ ಕುಣಿತ, ಚಿಟ್ಟಿಮೇಳ, ಮಹಿಳೆ ಮತ್ತು ಪುರುಷರ ಕೋಲಾಟ ಸೇರಿದಂತೆ ಹಲವಾರು ಕಲಾತಂಡಗಳುಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಭಾನುವಾರ ರಜಾ ದಿನ ಹಾಗೂ ಹಂಪಿ ಉತ್ಸವದ ಕೊನೆಯ ದಿನವಾಗಿದ್ದರಿಂದ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಡೆಗಳಿಂದ ಅಪಾರ ಜನ ಬಂದಿದ್ದರು. ಮೆರವಣಿಗೆ ಹಾದು ಹೋಗುವ ರಸ್ತೆಯುದ್ದಕ್ಕೂ ನಿಂತು ಮೆರವಣಿಗೆ ಕಣ್ಣುಂಬಿಕೊಂಡರು. ಮೂರು ದಿನಗಳ ಉತ್ಸವದ ಅವಧಿಯಲ್ಲಿ ಭಾನುವಾರ ಸಂಭ್ರಮದ ವಾತಾವರಣ ಕಂಡು ಬಂತು.
ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ಕಲಾತಂಡಗಳ ಮೆರವಣಿಗೆಯು ಹಂಪಿಯ ಬಜಾರ್ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವೈಭವದಿಂದ ಸಾಗಿ ಸಂಪನ್ನಗೊಂಡಿತು.