ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಂಗ್ರೆಸ್ ಮುಖಂಡನಿಗೆ ಮತ್ತೊಬ್ಬ ಕಾಂಗ್ರೆಸ್ ಮುಖಂಡರ ಗುಂಪೊಂದು ಮನೆಗೆ ನುಗ್ಗಿ ಹೆಂಡ್ತಿ ಸೇರಿದಂತೆ ಗಂಡನಿಗೂ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದು ಹಿರಿಯೂರು ವಿಧಾನಸಭಾ ಕ್ಷೇತ್ರ ಗೂಂಡಾಗಳ ಕ್ಷೇತ್ರ ಆಯ್ತಾ ಎನ್ನುವ ಭಯ ಶುರುವಾಗಿದೆ.
ಹಿರಿಯೂರು ಹುಳಿಯಾರ್ ರಸ್ತೆಯ ಗಾಡಿ ಬಸಣ್ಣ ಬಡಾವಣೆಯಲ್ಲಿರುವ ಕಂದಿಕೆರೆ ಜಗದೀಶ್ ಎನ್ನುವ ಕಾಂಗ್ರೆಸ್ ಮುಖಂಡನ ಮನೆಗೆ ಜವನಗೊಂಡನಹಳ್ಳಿಯ ಕಾಂಗ್ರೆಸ್ ಮುಖಂಡರ ಗುಂಪೊಂದು ಮನೆಗೆ ನುಗ್ಗಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಮಾರ್ಚ್-17ರ ರಾತ್ರಿ ಜರುಗಿದೆ.
ಈ ಕುರಿತು ಹಲ್ಲೆಗೊಳಗಾದ ಸಂತ್ರಸ್ತ ಕೆ.ಜಗದೀಶ್ ಪತ್ನಿ ಆರ್.ಸರಸ್ಪತಿ ಎನ್ನುವರು ಹಿರಿಯೂರು ಪೊಲೀಸ್ ಠಾಣೆಗೆ ಮಾ.19 ರಂದು ದೂರು ನೀಡಿದ್ದು ಜವನಗೊಂಡನಹಳ್ಳಿ ಕೇಶವ್, ಮಾರುತಿ ಸೇರಿದಂತೆ ಇತರೆ 8 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ-
ಮಾರ್ಚ್-17ರ ರಾತ್ರಿ ಕೇಶವ್ ಎನ್ನುವ ವ್ಯಕ್ತಿ ಕಂದಿಕೆರೆ ಜಗದೀಶ್ ಅವರ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಮನೆಯ ವಿಳಾಸ ಕೇಳಿ ಅಲ್ಲೇ ಬಂದು ಹೊಡೆಯುವುದಾಗಿ ಬೆದರಿಕೆ ಹಾಕುತ್ತಾರೆ. ನಂತರ ಜಗದೀಶ್ ಮನೆಗೆ ಆಗಮಿಸಿದ ಕೇಶವ್, ಮಾರುತಿ ಸೇರಿದಂತೆ ಇತರೆ 8 ಮಂದಿ ಇದ್ದ ಗುಂಪು ಜಗದೀಶ್ ಅವರ ಮನೆಯಲ್ಲೇ ಜಗದೀಶ್ ಗೂ ಹಿಗ್ಗಾಮುಗ್ಗಾ ಹಲ್ಲೆ ಮಾಡುತ್ತಾರೆ. ಬಿಡಿಸಲು ಬಂದ ಜಗದೀಶ್ ಪತ್ನಿ ಸರಸ್ಪತಿ ಅವರಿಗೂ ಹಲ್ಲೆ ಮಾಡಿ ಬೆದರಿಕೆ ಹಾಕುತ್ತಾರೆ. ಆ ವೇಳೆಗೆ ಅಕ್ಕ ಪಕ್ಕದ ಮನೆಯವರು ಆಗಮಿಸಿ ಗಲಾಟೆ ಸುಮ್ಮನಿರಿಸಿ ಕೇಶವ್ ಮತ್ತು ಅವರ ಗುಂಪನ್ನ ಅಲ್ಲಿಂದ ಕಳುಹಿಸುತ್ತಾರೆ.
ಗಲಾಟೆಗೆ ಕಾರಣ ಏನು-
ಹಿರಿಯೂರು ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 50 ಕೋಟಿ ರೂ.ಗೂ ಅಧಿಕ ಮೊತ್ತದ ಕ್ರಿಯಾ ಯೋಜನೆಯನ್ನು ಮಾಡಿ ಟೆಂಡರ್ ಕರೆಯುವ ಹಂತಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ನೀನು(ಜಗದೀಶ್) ಏಕೆ ಹಸ್ತಕ್ಷೇಪ ಮಾಡುತ್ತೀಯ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನೀರು ಸುಧಾಕರ್ ಗೆ ಮತ ಹಾಕಿಸಿದ್ದೀಯಾ, ನೀನೇ ಟೆಂಡರ್ ಹಾಕಬೇಕಾ ಎಂದು ಕೇಶವ್ ಎನ್ನುವ ವ್ಯಕ್ತಿ ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಪ್ರಶ್ನಿಸುತ್ತಾರೆ. ಇದರಿಂದ ಕುಪಿತಗೊಂಡ ಜಗದೀಶ್ ಕೂಡಾ ಅವಾಚ್ಯ ಶಬ್ದಗಳಿಂದ ಕೇಶವ್ ಗೆ ನಿಂದಿಸುತ್ತಾರೆ. ಮಾತಿಗೆ ಮಾತು ಬೆಳೆದು ಕೇಶವ್ ಮತ್ತು ಅವರ 8 ಮಂದಿ ಗುಂಪು ಜಗದೀಶ್ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ಸಂಭವಿಸಿದೆ.
ಸಚಿವರ ಖಂಡನೆ-
ಕಾಂಗ್ರೆಸ್ ಸೇರಿದಂತೆ ಯಾರು ಯಾವುದೇ ಪಕ್ಷದ ಕಾರ್ಯಕರ್ತರಾಗಿರಲಿ, ಮನೆಗೆ ನುಗ್ಗಿ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ಇದನ್ನ ನಾನು ಸಹಿಸುವುದಿಲ್ಲ. ಕ್ಷೇತ್ರದಲ್ಲಿ ಶಾಂತಿ ನೆಲೆಸಲು ಎಲ್ಲ ರೀತಿಯ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.