ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ :
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೆರೆಗೆ ಧುಮುಕಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯೋರ್ವರನ್ನು, ಸಿನಿಮೀಯ ಶೈಲಿಯಲ್ಲಿ ಪೊಲೀಸರಿಬ್ಬರು ರಕ್ಷಿಸಿ ಜೀವ ಉಳಿಸಿದ ಘಟನೆ, ತೀರ್ಥಹಳ್ಳಿ ತಾಲೂಕಿನ ಯಡೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಳೂರು ಪೊಲೀಸ್ ಠಾಣೆ ಹೆಡ್ ಕಾನ್ಸ್’ಟೇಬಲ್ ರಾಮಪ್ಪ ಹಾಗೂ ಡಿಎಆರ್ ವಾಹನ ಚಾಲಕರಾದ ಎ.ಹೆಚ್.ಸಿ. ಲೋಕೇಶ್ ಅವರೇ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ಉಳಿಸಿದವರು.
ಘಟನೆಯ ಹಿನ್ನೆಲೆ :
ಸೆ. ೧೭ ರಂದು ರಾತ್ರಿ, ವ್ಯಕ್ತಿಯೊಬ್ಬರು ತೀರ್ಥಹಳ್ಳಿಯ ಯಡೇಹಳ್ಳಿ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆಗೆ ಪ್ರ್ರಯತ್ನಿಸುತ್ತಿದ್ದಾರೆಂದು ಪೊಲೀಸ್ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಮಾಳೂರು ಠಾಣೆ ವ್ಯಾಪ್ತಿಯಕರ್ತವ್ಯದಲ್ಲಿದ್ದ ರಾಮಪ್ಪ ಹಾಗೂ ಚಾಲಕ ಲೋಕೇಶ್ ಅವರು ತ್ವರಿತಗತಿಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದಾಗ ಕೆರೆ ಸಮೀಪದ ಅಂಗನವಾಡಿ ಕಟ್ಟಡದ ಬಳಿ ಕಾರೊಂದು ನಿಂತಿರುವುದನ್ನು ಗಮನಿಸಿದ್ದಾರೆ.
ಕೆರೆಯ ಬಳಿ ಶೋಧಿಸಿದಾಗ, ಕೆರೆ ನೀರಿನಲ್ಲಿ ವ್ಯಕ್ತಿಯೋರ್ವರು ಮುಳುಗುತ್ತಿರುವುದು ಕಂಡುಬಂದಿದೆ. ನೀರಿಗೆ ಧುಮುಕಿ ಅವರನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.