ಭೂಮಿ ಮತ್ತು ವಸತಿಗಾಗಿ ಬೃಹತ್ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ನದಾತ ರೈತನಿಗೆ ಸೌಲಭ್ಯಗಳನ್ನು ಕೊಡುವಲ್ಲಿ ಸೋತಿವೆ ಎಂದು ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬಗರ್‌ಹುಕುಂ ಭೂಮಿಗಳ ಸಮಸ್ಯೆ ಬಗೆಹರಿಸಿ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

- Advertisement - 

ರೈತರಿಗೆ ಭೂಮಿ ಜನ್ಮಸಿದ್ದ ಹಕ್ಕು. ಯಾವುದೇ ಕಾರಣಕ್ಕೂ ಅಕ್ರಮ ಎನ್ನುವ ಪದ ಬಳಸುವಂತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಲು ಆಳುವ ಸರ್ಕಾರಗಳಿಗೆ ಆಗುತ್ತಿಲ್ಲ. ಕೃಷಿ ಎನ್ನುವುದು ಜೂಜಾಟವಾದಂತಿದೆ. ಹದ ಮಳೆ ಬಂದರೆ ಮಾತ್ರ ರೈತನ ಕೈಗೆ ಬೆಳೆಗಳು ಸಿಗುತ್ತವೆ. ಅತಿಯಾಗಿ ಮಳೆ ಬಂದರೆ ಬೆಳೆ ನಾಶವಾಗುತ್ತದೆ.

ಇನ್ನೊಂದು ವಾರ ಮಳೆ ಬರದಿದ್ದರೆ ದನ-ಕರುಗಳ ಮೇವಿಗೂ ಕಷ್ಟವಾಗುತ್ತದೆ. ಬಿಸಿಲಿಗೆ ರಾಗಿ ತೆನೆಗಳು ಬಾಡುತ್ತಿವೆ. ಕೃಷಿಗಾಗಿ ಭೂಮಿಗೆ ಸುರಿದ ಬಂಡವಾಳ ಕೂಡ ಕೈಗೆ ಸಿಗುತ್ತಿಲ್ಲ. ದೇಶಕ್ಕೆ ಆಹಾರ ಕೊಡುತ್ತಿರುವ ರೈತರನ್ನು ಸರ್ಕಾರಗಳು ಕಡೆಗಣಿಸಬಾರದು. ಸಾಲ ಸೂಲ ಮಾಡಿ ಒಕ್ಕಲುತನದಲ್ಲಿ ತೊಡಗಿರುವ ರೈತರು ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಗೊಬ್ಬರ ಕೊಡಬೇಕಾಗಿರುವ ಸರ್ಕಾರ ಒಂದು ಬ್ಯಾಗ್ ಗೊಬ್ಬರಕ್ಕೆ ನಾಲ್ಕು ನೂರುಗಳನ್ನು ಹೆಚ್ಚಿಗೆ ಪಡೆಯುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?

- Advertisement - 

ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ ಬಗರ್ ಹುಕುಂ ಸಮಸ್ಯೆ ಇಡಿ ದೇಶದಲ್ಲಿದೆ. ರಾಜಕಾರಣಿಗಳಿಗೆ ಪ್ರಬಲ ಇಚ್ಚಾಶಕ್ತಿಯಿಲ್ಲದ ಕಾರಣ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಇನ್ನು ಹಕ್ಕುಪತ್ರಗಳು ಸಿಕ್ಕಿಲ್ಲ. ನ್ಯಾಯಾಲಯ ಕೂಡ ಈ ಹಿಂದೆ ಮಧ್ಯ ಪ್ರವೇಶಿಸಿ ನ್ಯಾಯ ಕೊಡುವಂತೆ ಆದೇಶಿಸಿದ್ದರೂ ಸರ್ಕಾರ ಅನುಷ್ಟಾನಗೊಳಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ೪೫ ಲಕ್ಷ ಬಗರ್‌ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೇವಲ ೧೪ ಲಕ್ಷ ರೈತರಿಗೆ ಮಾತ್ರ ಸಾಗುವಳಿ ಪತ್ರಕ್ಕೆ ಅನುಮೋದನೆ ನೀಡಿದ್ದು, ಅದನ್ನಾದರೂ ಕೂಡಲೆ ಬಗೆಹರಿಸುವಂತೆ ಆಗ್ರಹಿಸಿದರು.

ಭ್ರಷ್ಟಾಚಾರ ವಿರೋಧಿ ಆಂದೋಲನ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ಮಾತನಾಡಿ ಬಗರ್ ಹುಕುಂ ಸಮಿತಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಫಾರಂ ನಂ.೫೦, ೫೩, ೫೭ ಸಮಿತಿಯಲ್ಲಿ ಪಾಸ್ ಆಗುತ್ತಿಲ್ಲ. ಪುನರ್ ಪರಿಶೀಲಿಸಬೇಕು. ಕೇಂದ್ರದಲ್ಲಿರುವ ಸರ್ಕಾರ ಒಂದು ರೂ.ಗೆ ಒಂದು ಎಕರೆಯಂತೆ ಒಂದು ಸಾವಿರ ಎಕರೆ ಜಮೀನನ್ನು ಅದಾನಿಗೆ ನೀಡಿದೆ. ಬಡವರು, ರೈತರ ಪರವಾಗಿಲ್ಲದ ಪ್ರಧಾನಿ ಮೋದಿ ಕೂಡಲೆ ಅಧಿಕಾರದಿಂದ ಕೆಳಗಿಳಿಯಬೇಕು. ಜನವಿರೋಧಿ, ಕಾರ್ಪೊರೇಟ್ ಪರವಾಗಿರುವ ಕೋಮುವಾದಿ ಬಿಜೆಪಿ.ಗೆ ಮುಂದಿನ ದಿನಗಳಲ್ಲಿ ಜನರೆ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ ಸರ್ಕಾರ ಕಾನೂನು ಬದಿಗಿಟ್ಟು ಸಾಮಾಜಿಕ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಬೇಕೆ ವಿನಃ ಎಲ್ಲದಕ್ಕೂ ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ಭೂಮಿ ಸಾಗುವಳಿದಾರರಿಗೆ ಅನ್ಯಾಯ ಮಾಡಬಾರದು. ಗೊಂದಲ್ಲದಲ್ಲಿರುವ ಅರಣ್ಯ-ಕಂದಾಯ ಇಲಾಖೆ ಭೂಮಿಗಳ ಜಂಟಿ ಸರ್ವೆ ನಡೆಸಿ ಭೂ ಮಂಜೂರಾತಿಗೆ ಅಡ್ಡಿಯಾಗಿರುವ ಕಾನೂನು ತಿದ್ದುಪಡಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ನೀಡುವಾಗ ಕಾನೂನು ಬದಲಾಯಿಸುವ ಸರ್ಕಾರಗಳು ಬಡವರಿಗೆ ಭೂಮಿ ನೀಡುವಾಗ ಏಕೆ ಇಲ್ಲದ ಸಲ್ಲದ ಕಾನೂನುಗಳನ್ನು ಅಡ್ಡ ತರುತ್ತವೆ. ಅಭಿವೃದ್ದಿ ಹೆಸರಿನಲ್ಲಿ ಅರಣ್ಯದಲ್ಲಿ ಮರಗಳನ್ನು ಕಡಿಯುವ ಇಲಾಖೆಗೆ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ತಕರಾರು ಮಾಡುವುದು ಏಕೆ ಎಂದು ಪ್ರಶ್ನಿಸಿದರು?

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ನಾಗರಾಜಪ್ಪ ನೆಲಗೇತಲಹಟ್ಟಿ, ರಾಜಪ್ಪ, ಅಂಜನಪ್ಪ, ಮಂಜಣ್ಣ, ಲಕ್ಷ್ಮಿದೇವಿ, ಪ್ರವೀಣ, ಜ್ಯೋತಿ, ತಿಮ್ಮಯ್ಯ, ಕರಿಯಮ್ಮ, ಶಿವಮೂರ್ತಿ, ತಿಪ್ಪೇಶ, ಮನ್ಸೂರ್, ಕಾಂತರಾಜ್, ರಾಮಚಂದ್ರ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Share This Article
error: Content is protected !!
";