ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪೌರ ಕಾರ್ಮಿಕರು ನಡೆಸುತ್ತಿರುವ ಮುಷ್ಕರ ಗುರುವಾರ ಮೂರನೆ ದಿನಕ್ಕೆ ಕಾಲಿಟ್ಟಿತು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ್ದರಿಂದ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಾಹನಗಳ ಸಂಚಾರ ಬಂದ್ ಆಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ.ದುರುಗೇಶಪ್ಪ ಪ್ರತಿನಿತ್ಯವೂ ಬೆಳಿಗ್ಗೆಯೇ ನಗರ ಸ್ವಚ್ಚತೆಯಲ್ಲಿ ತೊಡಗುವ ಪೌರ ಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೆ ನಗರದಲ್ಲಿ ಎಂತಹ ಕ್ಲಿಷ್ಠಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ. ಚರಂಡಿ ಸ್ವಚ್ಚಗೊಳಿಸುವುದರಿಂದ ಹಿಡಿದು ಶೌಚಾಲಯ ಗುಂಡಿಯನ್ನು ಶುಚಿಗೊಳಿಸುವವರು ಪೌರ ಕಾರ್ಮಿಕರು ಆದರೂ ಸರ್ಕಾರ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಹೊರ ಗುತ್ತಿಗೆ ರದ್ದುಪಡಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು. ವಾಲ್‌ಮನ್‌ಗಳು, ನೀರಗಂಟಿಗಳು, ವಾಹನ ಚಾಲಕರು, ಪೌರ ಕಾರ್ಮಿಕರು ಜೀವನ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ಅದೇ ಒಬ್ಬ ಬಿಲ್ ಕಲೆಕ್ಟರ್ ಬಡ್ತಿ ಪಡೆದು ಮುಖ್ಯಾಧಿಕಾರಿಯಾಗಬಹುದು. ಪೌರ ಕಾರ್ಮಿಕರಿಗೆ ಯಾವ ಬಡ್ತಿಯೂ ಇಲ್ಲ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ ಡಿ.ದುರುಗೇಶಪ್ಪ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೌರ ಕಾರ್ಮಿಕರಿಗೂ ಕನಿಷ್ಟ ಗೌರವ ಕೊಡಬೇಕೆಂದು ಒತ್ತಾಯಿಸಿದರು.
ಪೌರ ಕಾರ್ಮಿಕರ ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಮಾತನಾಡಿದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ರಾಜ್ಯ ಸರ್ಕಾರ ನಿರ್ಲಕ್ಷೆ ಮಾಡುವುದು ಬೇಡ. ಆದಷ್ಟು ಬೇಗನೆ ಪೌರ ಕಾರ್ಮಿಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕು. ಆರೋಗ್ಯ ಹದಗೆಡುವಂ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸರ್ಕಾರದಿಂದ ವೇತನ ಕೊಡಬೇಕು. ಗುತ್ತಿಗೆ, ಹೊರ ಗುತ್ತಿಗೆ ಬೇಡ. ಮೂರು ದಿನಗಳಿಂದ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿರುವುದಕ್ಕೆ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿವೆ. ಸರ್ಕಾರ ಕೂಡಲೆ ಗಮನ ಕೊಡಬೇಕೆಂದು ಮನವಿ ಮಾಡಿದರು.
ನಗರ ಸ್ವಚ್ಚತೆಯಲ್ಲಿ ತೊಡಗುವ ಪೌರ ಕಾರ್ಮಿಕರಿಗೂ ಜ್ಯೋತಿ ಸಂಜೀವಿನಿ ಮತ್ತು ಆರೋಗ್ಯ ಸಂಜೀವಿನಿಯಂತ ಸ್ಕೀಂಗಳು ಸಿಗಬೇಕು. ಯಾವುದೆ ಕಾರಣಕ್ಕೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೌರ ಕಾರ್ಮಿಕರ ಮುಷ್ಕರವನ್ನು ಹಗುರವಾಗಿ ತೆಗೆದುಕೊಳ್ಳಬಾರದೆಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ, ಪೌರ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ರೇಣುಕ, ಜಿಲ್ಲಾಧ್ಯಕ್ಷ ಎಲ್.ಪಿ.ಲವ, ಪುಟ್ಟಪ್ಪ ಸೇರಿದಂತೆ ನೂರಾರು ಪೌರ ಕಾರ್ಮಿಕರು, ವಾಲ್‌ಮನ್‌ಗಳು, ನೀರು ಸರಬರಾಜುದಾರರು, ಚಾಲಕರು, ಹೆಲ್ತ್‌ಇನ್ಸ್‌ಪೆಕ್ಟರ್‌ಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.