ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಮನೆಗಳ್ಳತನವೊಂದು ನೇಪಾಳಿ ದಂಪತಿಯಿಂದ ನಡೆದಿದೆ. ಬೆಂಗಳೂರಿನ ಹೆಚ್ಎಎಲ್ನ ಶಾಸ್ತ್ರಿನಗರದ ಉದ್ಯಮಿ ಮನೆಯಲ್ಲಿದ್ದ ನಗದು, ಚಿನ್ನಾಭರಣ, ಲೈಸೆನ್ಸ್ ಪಿಸ್ತೂಲ್, 2 ಕೆಜಿ ಚಿನ್ನ ಮತ್ತು 10 ಲಕ್ಷ ರೂ ನಗದು ದೋಚಿ ಪರಾರಿ ಆಗಿದ್ದಾರೆ.
ಕಳೆದ 3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು. ಮೇ 27ರಂದು ಕುಟುಂಬ ಸಮೇತ ರಮೇಶ್ ತಿರುಪತಿಗೆ ಹೋಗಿದ್ದರು. ಮನೆ ನೋಡಿಕೊಳ್ಳಲು ನೇಪಾಳಿ ದಂಪತಿ ಬಿಟ್ಟು ತಿರುಪತಿಗೆ ತೆರಳಿದ್ದರು.
ಈ ಅವಕಾಶ ಸದ್ಬಳಕೆ ಮಾಡಿಕೊಂಡ ನೇಪಾಳಿ ದಂಪತಿ ಸೇರಿ ಐದು ಜನರಿಂದ ಮನೆಯ ಪ್ರಮುಖ ಮತ್ತು ಬೆಡ್ ರೂಂ ಬಾಗಿಲು ಮುರಿದು ಕಳ್ಳತನ ಮಾಡಿ ಲಕ್ಷಾಂತರ ಹಣ ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕಳ್ಳತನಕ್ಕೂ ಮುನ್ನ ಕಾರ್ ಬುಕ್ ಮಾಡಿದ್ದ ಕಿರಾತಕರು ನಾಲ್ಕು ಜನ ಮನೆ ಬಳಿ ಬಂದ ಕಾರಿನಲ್ಲಿ ಚಿನ್ನಭರಣ, ಹಣದ ಬ್ಯಾಗ್ಗಳನ್ನು ತುಂಬಿಕೊಂಡು ಹೋಗಿದ್ದಾರೆ. ಕಾರಿನ ಚಾಲಕನಿಗೂ ಕಳ್ಳತನಕ್ಕೂ ಯಾವುದೇ ಸಂಬಂಧವಿಲ್ಲ.
ಇತ್ತ ಮೇ 28ರ ಬೆಳಗಿನ ಜಾವ ರಮೇಶ್, ಮೊಬೈಲ್ನಲ್ಲಿ ಮನೆಯ ಸಿಸಿಟಿವಿ ಪರಿಶೀಲಿಸಿದ್ದು, ಆಫ್ ಆಗಿತ್ತು. ಕರೆಂಟ್ ಹೋಗಿ ಸಿಸಿಟಿವಿ ಆಫ್ ಆಗಿರಬಹುದು ಅಂದುಕೊಂಡಿದ್ದಾರೆ. ನಂತರ ಪಕ್ಕದ ಮನೆಯವರಿಗೆ ಪೊನ್ ಕರೆ ಮಾಡಿ ವಿಚಾರಿಸಿದಾಗ ಮನೆಯಲ್ಲಿ ಯಾರೂ ಇಲ್ಲ ಎಂದಿದ್ದಾರೆ.
ಕೂಡಲೇ ತಮ್ಮ ಆಪ್ತ ಸ್ನೇಹಿತರಿಗೆ ಮನೆ ಬಳಿ ಹೋಗಲು ತಿಳಿಸಿದ ರಮೇಶ್, ಈ ವೇಳೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.