ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡುವಂತಿಲ್ಲ ಎಂಬುದಾಗಿ ರಾಜ್ಯ ಸರ್ಕಾರ 2015ರ ಸೆಪ್ಟಂಬರ್21ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರಿನ ಜಗದೀಶ್ಎಂಬುವರು ಅರ್ಜಿ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂಬ ನಿಯಮಕ್ಕೆ ಇದು ವಿರುದ್ಧವಾಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ಅಲ್ಲದೆ, ರಾಜ್ಯ ಸರ್ಕಾರದ ಈ ಆದೇಶವು ರಾಜ್ಯದಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿಗೆ ಅವಕಾಶ ನೀಡಿದಂತಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತವರಿಯನ್ನು ಗುರುತಿಸಲು ಸರ್ವೇ ಕಾರ್ಯ ಮಾಡಿ ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶದಿಂದ ಈ ಹಿಂದೆ ಅವಿಭಕ್ತ ಕುಟುಂಬಗಳು ವಿಂಗಡಣೆಯಾಗಿ ಕುಟುಂಬದ ಪ್ರತಿ ಸದಸ್ಯರು ತಲಾ ಮೂರು ಎಕರೆಯಂತೆ ಜಮೀನು ಒತ್ತುವರಿ ಮಾಡಿಕೊಂಡಿರುವುದಕ್ಕೆ ಅವಕಾಶ ನೀಡದಂತೆ ನಿರ್ದೇಶನ ನೀಡಬೇಕು. ಈ ರೀತಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿರುವ ಅರಣ್ಯಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ಅರಣ್ಯಗಳು ಪರಿಸರ ಸಮತೋಲನ, ಜೀವ ವೈವಿಧ್ಯತೆ ಹಾಗೂ ಸದೃಢ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ ಸಂಪನ್ಮೂಲಗಳಾಗಿವೆ. ಭಾರತೀಯ ಸಂವಿಧಾನದ ವಿಧಿ 48A ಪ್ರಕಾರ ರಾಜ್ಯವು ಪರಿಸರ ಮತ್ತು ಅರಣ್ಯಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದು, ವಿಧಿ 51A(g) ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಪ್ರಕೃತಿ ಸಂಪನ್ಮೂಲಗಳನ್ನು ಕಾಪಾಡುವ ಕರ್ತವ್ಯವಿದೆ. ಆದರೆ, ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅರಣ್ಯ ಭೂಮಿಗಳ ಅಕ್ರಮ ಅತಿಕ್ರಮಣ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರದ ಆದೇಶ ಸುಪ್ರೀಂಕೋರ್ಟ್ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಈ ಆದೇಶ ರದ್ದುಪಡಿಸದಿದ್ದಲ್ಲಿ ಅರಣ್ಯ ಸಂಪನ್ಮೂಲಗಳ ಸಂರಕ್ಷಣೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಆದೇಶಕ್ಕೆ ತಡೆ ನೀಡಬೇಕು. ಅಲ್ಲದೆ ಅರಣ್ಯ ಸಂರಕ್ಷಣಾ ಕಾಯ್ದೆಯ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಕೋರಿ ಅರ್ಜಿದಾರರ 2024ರ ಎಪ್ರಿಲ್ 3 ರಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಕಾರ 1997ರ ಬಳಿಕ ಯಾವುದೇ ಒತ್ತುವರಿಯನ್ನು ಸಕ್ರಮ ಮಾಡುವುದಕ್ಕೆ ಅವಕಾಶವಿಲ್ಲ. ಒಂದು ವೇಳೆ ಒತ್ತುವರಿಯಾಗಿದ್ದರೂ ಕಡ್ಡಾಯವಾಗಿ ತೆರವುಗೊಳಿಸಬೇಕು ಎಂಬ ನಿಯಮವಿದೆ. ಅದರ ನಡುವೆಯೂ ನಿರಂತರವಾಗಿ ಒತ್ತುವರಿ ನಡೆದಿದೆ. ಅಲ್ಲದೆ, ರಾಜ್ಯ ಸರ್ಕಾರದ ಆದೇಶವನ್ನು ದುರ್ಬಳಕೆ ಮಾಡಿಕೊಂಡು ದೊಡ್ಡ ಪ್ರಮಾಣದ ಅರಣ್ಯ ಭೂಮಿಯನ್ನು ಕುಟುಂಬ ಸದಸ್ಯರ ಹೆಸರಿನಲ್ಲಿ ಸಣ್ಣ ಭಾಗಗಳಾಗಿ ಹಂಚಿ ಮೂರು ಎಕರೆಗಿಂತ ಕಡಿಮೆ ಎಂದು ತೋರಿಸುವ ಮೂಲಕ ಕಾನೂನಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಅರಣ್ಯ ಭೂಮಿ ಒತ್ತುವರಿದಾರರಿಗೆ ಪುನರ್ವಸತಿ ಘೋಷಣೆ ಮಾಡಿ ಹಲವು ವರ್ಷಗಳು ಕಳೆದರೂ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಮೂರು ಎಕರೆಗಿಂತ ಹೆಚ್ಚು ಒತ್ತುವರಿಗಳನ್ನು ತೆರವುಗೊಳಿಸುವ ಕ್ರಮಗಳನ್ನು ಕೈಗೊಂಡಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ, ಸಂವಿಧಾನ ಮತ್ತು ಸುಪ್ರೀಂಕೋರ್ಟ್ ಆದೇಶಗಳ ವಿರುದ್ಧ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.ಲಕ್ಷಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿ: ಅಧಿಕೃತ ದಾಖಲೆಗಳ ಪ್ರಕಾರ 1995ರಲ್ಲಿ ಇದ್ದಂತೆ 42,518 ಎಕರೆ ಒತ್ತವರಿ 2014ರ ವೇಳೆಗೆ 1,65,796 ಎಕರೆಗೆ ಏರಿಕೆಯಾಗಿದ್ದು, 2015ರ ಸೆಪ್ಟೆಂಬರ್ ಅಂತ್ಯಕ್ಕೆ 2,04,442 ಎಕರೆಗೆ ಹೆಚ್ಚಾಗಿದೆ.
ವಿದ್ಯಾರಣ್ಯಪುರ ನಿವಾಸಿ ಜಗದೀಶ್ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2015ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2,14,000 ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಅದರಲ್ಲಿ ಮೂರು ಎಕರೆಗಿಂತಲೂ ಕಡಿಮೆ ಪ್ರಮಾಣದಲ್ಲಿ 1,15,000 ಎಕರೆ ಭೂಮಿ ಒತ್ತುವರಿಯಾಗಿದೆ. ಆದರೆ, ರಾಜ್ಯ ಸರ್ಕಾರ ಮಾಡಿರುವ ಆದೇಶದಿಂದ ಈ ಭೂಮಿ ತೆರವು ಮಾಡುವುದಕ್ಕೆ ಅವಕಾಶ ಇಲ್ಲವಾಗಿದೆ.
ಮೂರು ಎಕರೆಗಿಂತಲೂ ಕಡಿಮೆ ಒತ್ತುವರಿ ಮಾಡಿರುವವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ 85 ಲಕ್ಷ ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಪ್ರತಿ ಮೂರು ಎಕರೆಗೆ 15 ಲಕ್ಷ ಪರಿಹಾರ ನೀಡುವುದು ಇಲ್ಲವೇ ಪರ್ಯಾಯ ಭೂಮಿ ಒದಗಿಸುವುದಾಗಿ ಹೇಳಲಾಗಿತ್ತು. ಆದರೆ, ಈವರೆಗೂ ಇದನ್ನು ಜಾರಿ ಮಾಡಿಲ್ಲ. ಆದ್ದರಿಂದ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

