ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿ-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರಸಂತೆಯ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು. ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ದೇಶ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ.

ಚಿತ್ರಸಂತೆ ಆಯೋಜಿಸಿರುವ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳನ್ನು ಸಿಎಂ ತಿಳಿಸಿದರು. ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯುವುದು ಹೆಮ್ಮೆಯ ಸಂಗತಿ.

ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ, ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರಸಂತೆ ಒದಗಿಸುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನರು ಭೇಟಿ ನೀಡುತ್ತಾರೆ. ಬೆಂಗಳೂರಿಗರಿಗೆ ಇದೊಂದು ಸುವರ್ಣಾವಕಾಶ ಎಂದು ಸಿದ್ದರಾಮಯ್ಯ ಹೇಳಿದರು.

ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ ಎಂದರು.

ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತಾಗುತ್ತದೆ.

ಸಂವಿಧಾನದ ಪೀಠಿಕೆಯನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರನ್ನೂ ಪ್ರತಿನಿಧಿಸುತ್ತಿದೆ. ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿಯಾಗಿದೆ. ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ. ಚಿತ್ರಕಲಾ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

 

- Advertisement -  - Advertisement - 
Share This Article
error: Content is protected !!
";