ಚಂದ್ರವಳ್ಳಿ ನ್ಯೂಸ್, ಉಡುಪಿ:
ಇನೋವಾ ಕಾರಿನ ತಯಾರಕರು ಮತ್ತು ಮಾರಾಟಗಾರರು ಗ್ರಾಹಕನಿಗೆ ಬದಲಿ ಕಾರು ಅಥವಾ ಕಾರಿನ ಮೌಲ್ಯ(ಹಣ)ವನ್ನು ಮರಳಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿ ಆದೇಶಿಸಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಚ್ಚೂರು ನಿವಾಸಿ ಶ್ರವಣ ಕುಮಾರ್ ಎಂಬವರು 2022ರ ನ.16ರಂದು ಟೊಯೋಟಾ ಕಂಪೆನಿಯ ಇನೋವಾ ಕಾರನ್ನು 5 ವರ್ಷಗಳ ವಾರೆಂಟಿಯೊಂದಿಗೆ ಉಡುಪಿಯ ಯುನೈಟೆಡ್ ಟೊಯೋಟಾ ಪ್ರೈವೇಟ್ ಲಿಮಿಟೆಡ್ ಮಳಿಗೆಯಲ್ಲಿ ಖರೀದಿಸಿದ್ದರು.
ತಯಾರಿಕಾ ನ್ಯೂನತೆಯಿಂದ ಕೂಡಿದ್ದ ಇನೋವಾ ಕಾರು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರು 1 ತಿಂಗಳವರೆಗೆ 1 ಸಾವಿರ ಕಿ.ಮೀ. ಚಲಿಸಿತ್ತು. ಆ ನಂತರ ಕಾರಿನ ತಯಾರಿಕಾ ದೋಷಗಳಿಂದ ಬಲಬದಿಯ ಟೈರ್ಗಳು ತನ್ನಷ್ಟಕ್ಕೆ ಜಖಂಗೊಂಡಿದ್ದವು. ಈ ಬಗ್ಗೆ ಖರೀದಿಸಿದ ಮಳಿಗೆಗೆ ಮಾಹಿತಿ ನೀಡಿದರೂ, ಅವರು ಸಮಸ್ಯೆ ಪರಿಹರಿಸಿರಲಿಲ್ಲ.
ಟೈರ್ಗಳಲ್ಲಿ ದೋಷಗಳಿಲ್ಲ:
ಇನೋವಾ ಕಾರಿನ ತಯಾರಿಕಾ ದೋಷ ಅವಗಣಿಸಿ ಕಾರನ್ನು ಮಾಲೀಕರಿಗೆ ವಾಪಸ್ ನೀಡಿದ್ದರು. ನಂತರ ಕಾರು ಕ್ರಮವಾಗಿ 5,000 ಕಿ.ಮೀ., 10,000 ಕಿ.ಮೀ. ಹಾಗೂ 3ನೇ ಸರ್ವೀಸ್ ಆದಾಗಲೂ ತಯಾರಿಕಾ ದೋಷ ಮತ್ತು ಟೈರ್ಗಳ ಸಮಸ್ಯೆ ಬಗೆಹರಿಯಲಿಲ್ಲ. ಕಾರಿನ ಮಾರಾಟ ಮಳಿಗೆಯವರು ಕಾರಿಗೆ ಅಳವಡಿಸಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಟೈರ್ಗಳು ಇದಕ್ಕೆ ಕಾರಣವೆಂದು ಆ ಕಂಪನಿಗೆ ಟೈರ್ಗಳನ್ನು ಪುನರ್ಪರಿಶೀಲನೆಗೆ ಕಳುಹಿಸಿದರು. ಆದರೆ ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಟೈರ್ಗಳಲ್ಲಿ ಯಾವುದೇ ದೋಷಗಳಿಲ್ಲ ಎನ್ನುವ ವರದಿ ನೀಡಿತು.
ಬಳಿಕ ಕಾರು ಮಾರಾಟ ಮಾಡಿದ ಮಳಿಗೆಯವರು ಕಾರಿನ ವಾರಂಟಿ ಸಮಯದ ಒಳಗೆ ಆದ ತೊಂದರೆಯನ್ನು ಸರಿಪಡಿಸದೇ ಸೇವಾ ನ್ಯೂನತೆ ಮಾಡಿರುವ ಬಗ್ಗೆ ಕಾರಿನ ಮಾಲೀಕರು ಲೀಗಲ್ ನೋಟಿಸ್ ನೀಡಿದರೂ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಬಳಿಕ ಕಾರಿನ ತಯಾರಕರು, ಮಾರಾಟಗಾರರು ಮತ್ತು ಕಾರಿನ ಟೈರ್ತಯಾರಕ ಸಂಸ್ಥೆಯ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ನ್ಯಾಯಕ್ಕಾಗಿ ಶ್ರವಣ ಕುಮಾರ್ ದೂರು ದಾಖಲಿಸಿ ವಾದ ಮಂಡಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ನ್ಯೂನತೆಯುಳ್ಳ ಕಾರನ್ನು ಬದಲಾಯಿಸಿ, ಅದೇ ಮಾದರಿಯ ಹೊಸ ಕಾರನ್ನು ಮಾಲೀಕರಿಗೆ ನೀಡಬೇಕು. ಇಲ್ಲವೇ ಕಾರಿನ ಅಂದಿನ ಮೌಲ್ಯ 32,08,952 ರೂ.ಗಳಿಗೆ ಶೇ.9ರಷ್ಟು ಬಡ್ಡಿಯೊಂದಿಗೆ 2022ರ ನ.16ಕ್ಕೆ ಅನ್ವಯವಾಗುವಂತೆ, ಪಾವತಿ ಮಾಡಿದ ಆದೇಶದೊಂದಿಗೆ ಗ್ರಾಹಕರಿಗೆ ಆದ ಮಾನಸಿಕ ತೊಂದರೆಯ ಬಗ್ಗೆ 50,000 ರೂ. ಹಾಗೂ ಅರ್ಜಿ ಖರ್ಚು 10,000 ರೂ.ಗಳನ್ನು 45 ದಿನಗಳ ಒಳಗೆ ಪಾವತಿಸಬೇಕೆಂದು ಕಾರಿನ ತಯಾರಕರು ಮತ್ತು ಮಾರಾಟಗಾರರಿಗೆ ಗ್ರಾಹಕರ ವೇದಿಕೆ ಮಹತ್ವದ ತೀರ್ಪು ನೀಡಿ ಆದೇಶಿಸಿದೆ.
ಉಡುಪಿಯ ಹಿರಿಯ ನ್ಯಾಯವಾದಿ ಗಂಗಾಧರ್ಹೆಚ್.ಎಂ. ಮತ್ತು ವಿಪಿನ್ ಜತ್ತನ್ ಅವರುಗಳು ಕಾರಿನ ಮಾಲೀಕ ಶ್ರವಣ ಕುಮಾರ್ ಪರವಾಗಿ ವಾದ ಮಂಡಿಸಿದ್ದರು.

