ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಜಪುರ ಗ್ರಾಮದ ಬಳಿ ನಡೆದಿದೆ.
ಈ ಕುರಿತು ಬಸ್ ಚಾಲಕ ರಾಮಲಿಂಗಪ್ಪ ಅವರು ಕೂಡ್ಲಿಗಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್ ವಿರುದ್ಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹರಿಹರದಿಂದ ಬಳ್ಳಾರಿಗೆ ತೆರಳುತ್ತಿದ್ದ ಬಸ್ ಚಾಲಕನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಏನಿದು ಘಟನೆ:
ಹರಿಹರ ಘಟಕಕ್ಕೆ ಸೇರಿದ ಸಾರಿಗೆ ಬಸ್ ಬಳ್ಳಾರಿಗೆ ಹೋಗುತ್ತಿತ್ತು. ಕೊಟ್ಟೂರಿನಿಂದ ಕೂಡ್ಲಿಗಿ ಬರುವ ರಸ್ತೆಯಲ್ಲಿನ ಮಲ್ಲನಾಯಕಹಳ್ಳಿ ಬಳಿ ಬಂದಾಗ ಬಸ್, ಮಂಜುನಾಥ್ ಹಾಗೂ ಇನ್ನೊಬ್ಬ ಕಾನ್‌ಸ್ಟೇಬಲ್ ಇದ್ದ ಬೈಕನ್ನು ಓವರ್ ಟೇಕ್ ಮಾಡಿ ಹೋಗಿದೆ.
ಅದೇ ವೇಳೆಗೆ ಎದುರಿನಿಂದ ಕಾರು ಬಂದಿದ್ದರಿಂದ ತಮ್ಮ ಬಸ್ ಬೈಕ್ಗೆ ಹ್ಯಾಂಡಲ್‌ಗೆ ತಾಗಿದ್ದು ಬಸ್ನ ಮಿರರ್ಲ್ಲಿ ಕಾಣಿಸದೇ ಇದ್ದುದರಿಂದ, ನಾವು ಬಸ್ ನಿಲ್ಲಿಸದೇ ಹೋಗಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಬಸ್ ಹಿಂದೆಯೇ ಬಂದ ಮಂಜುನಾಥ್, ಗಜಾಪುರ ಬಳಿ ಬಸ್ ನಿಲ್ಲಿಸಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆಯಲು ಬಂದಾಗ ನಾನು ಬಾಗಿಲು ಹಾಕಿಕೊಂಡೆ.
ಆಗ ಬಾಗಿಲಿನಿಂದ ಬಸ್ ಒಳಗೆ ಬಂದು ಚಪ್ಪಲಿಯಿಂದ ತಮ್ಮ ತಲೆ, ಮುಖಕ್ಕೆ, ಮೈ ಮೇಲೆ ಹೊಡೆದು ತಮ್ಮ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಬಸ್‍ನಿಂದ ಕೆಳಗಿಳಿದವರು ಮತ್ತೆ ತನ್ನ ಕೈಯಲ್ಲಿದ್ದ ಹೆಲ್ಮೆಟ್‍ನಿಂದ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಬಸ್ ಚಾಲಕ ತಿಳಿಸಿದ್ದಾರೆ.
ಘಟನೆಯ ಬಳಿಕ ಕೂಡ್ಲಿಗಿಗೆ ಬಂದ ಬಸ್ ಚಾಲಕ ರಾಮಲಿಂಗಪ್ಪ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜುನಾಥ್ ವಿರುದ್ದ ದೂರು ನೀಡಿದ್ದು, ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

