ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಟೋಲ್ ಪ್ಲಾಜಾದ ಬೂತ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಟೋಲ್ ಪ್ಲಾಜಾ ಬಳಿ ಶುಕ್ರವಾರ ಮುಂಜಾನೆ ಜರುಗಿದೆ.
ಸ್ಲೀಪರ್ ಕೋಚ್ ಖಾಸಗಿ ಬಸ್ ಅತಿವೇಗವಾಗಿ ಬಂದು ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದ ಭೀಕರ ದೃಶ್ಯಗಳು ಟೋಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಟೋಲ್ ಬೂತ್‌ಗೆ ಗುದ್ದಿದ ನಂತರ ಬಸ್ ಸುಮಾರು ನೂರು ಮೀಟರ್ ದೂರ ಮುಂದಕ್ಕೆ ಚಲಿಸಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮತ್ತೆ ಹಿಂದಕ್ಕೆ ಚಲಿಸಿದೆ.
ಹಿಂದಕ್ಕೆ ಚಲಿಸಿ ನೇರವಾಗಿ ಟೋಲ್ ಬೂತ್‌ಗೆ ಮತ್ತೆ ಡಿಕ್ಕಿ ಹೊಡೆದು ಪಲ್ಟಿ ಆಗುವ ಹಂತಕ್ಕೆ ಹೋಗಿ ಬಸ್ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅಪಘಾತವಾಗುತ್ತಿದ್ದಂತೆ ಕೆಲ ಪ್ರಯಾಣಿಕರು ಬಸ್‌ನಿಂದ ಕೆಳಕ್ಕೆ ಜಿಗಿದು, ಬಸ್ ನಿಲ್ಲಿಸಲು ಯತ್ನಿಸಿದ ದೃಶ್ಯಗಳೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

