ಪ್ರೀತಿ ನಿರಾಕರಿಸಿದ ಯುವತಿಯ ಮನೆಯ ಬೈಕ್, ಕಾರುಗಳಿಗೆ ಬೆಂಕಿ ಇಟ್ಟ ರೌಡಿ ಶೀಟರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರೀತಿ ನಿರಾಕರಿಸಿದ ಯುವತಿಯ ಮೇಲಿನ ಸಿಟ್ಟಿಗೆ ಕಾರು
, ದ್ವಿಚಕ್ರ ವಾಹನಗಳಿಗೆ ರೌಡಿಶೀಟರ್‌ ಒಬ್ಬ ಬೆಂಕಿಯಿಟ್ಟ ಘಟನೆ ತಡರಾತ್ರಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಹಾಗೂ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹನುಮಂತನಗರ ಠಾಣೆಯ ರೌಡಿಶೀಟರ್ ರಾಹುಲ್(
25) ತನ್ನ ಸಹಚರರೊಂದಿಗೆ ತೆರಳಿ ಯುವತಿಯ ಮನೆಯವರ ಎರಡು ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟು ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 ಕಳೆದ 9 ವರ್ಷಗಳಿಂದ ಯುವತಿಯನ್ನು ರಾಹುಲ್ ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಯುವತಿ ರಾಹುಲ್‌ನ ಸಂಪರ್ಕದಿಂದ ದೂರ ಉಳಿದು ನಿರ್ಲಕ್ಷ್ಯಿಸಿದ್ದಳು.‌ಇದರಿಂದ ಸಿಟ್ಟಿಗೆದ್ದ ಆರೋಪಿ ಶನಿವಾರ ತನ್ನ ಸಹಚರರೊಂದಿಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಯುವತಿಯ ಮನೆ ಬಳಿ ಬಂದು ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟಿದ್ದಾನೆ.

ಬಳಿಕ ಸುಬ್ರಹ್ಮಣ್ಯಪುರ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಯುವತಿಯ ಮತ್ತೊಂದು ಮನೆ ಬಳಿ ರಾಹುಲ್ ಮತ್ತವನ ಸಹಚರರು ತೆರಳಿದ್ದಾರೆ. ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ಅನ್ನು ಬೆದರಿಸಿ ಯುವತಿಯ ಫೋಟೋ ತೋರಿಸಿ ಆಕೆಯ ಮನೆಯವರ ಕಾರುಗಳ ಬಗ್ಗೆ ತಿಳಿದುಕೊಂಡು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತಕ್ಷಣ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರಿಂದ ಅವಘಡವೊಂದು ತಪ್ಪಿದೆ‌. ಘಟನೆಯಲ್ಲಿ ಒಟ್ಟು 2 ಕಾರು, ದ್ವಿಚಕ್ರ ವಾಹನ ಬೆಂಕಿಗಾಹುತಿಯಾಗಿವೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ​.

ಆರೋಪಿಯ ಹಿನ್ನೆಲೆ : ಹತ್ಯೆ, ದರೋಡೆ, ಸುಲಿಗೆ, ಮಾದಕ ಪದಾರ್ಥಗಳ ಮಾರಾಟ ಸೇರಿದಂತೆ ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 18ಕ್ಕೂ ಅಧಿಕ ಪ್ರಕರಣಗಳಲ್ಲಿ ರಾಹುಲ್ ಆರೋಪಿ. 2022ರಲ್ಲಿ ನ್ಯಾಯಾಲಯದಿಂದ ವಾರೆಂಟ್‌ಜಾರಿಯಾದ ಬಳಿಕವೂ ತಲೆಮರೆಸಿಕೊಂಡಿದ್ದ ರಾಹುಲ್, ನನ್ನನ್ನು ಬಂಧಿಸಲು ಯಾರಿಗೂ ಸಾಧ್ಯವಿಲ್ಲ, ಪೊಲೀಸರು ತಾಕತ್ತಿದ್ದರೆ ಬಂಧಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಎನ್ನಲಾಗಿದೆ.

ಕೋಣನಕುಂಟೆ ಬಳಿಯಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ಹನುಮಂತನಗರ ಠಾಣೆಯ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದ‌. ಬಳಿಕ ಪಿಎಸ್ಐ ಬಸವರಾಜ್ ಪಾಟೀಲ್ ಆರೋಪಿಯ ಕಾಲಿಗೆ ಗುಂಡು ಹಾರಿಸುವ ಮೂಲಕ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆರೋಪಿ ಮತ್ತು ಆತನ ಸಹಚರರ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದರು.

 

Share This Article
error: Content is protected !!
";