ಅದ್ಧೂರಿ ಶೋಭಾಯಾತ್ರೆಯೊಂದಿಗೆ ಹಿಂದೂಮಹಾ ಗಣಪತಿಗೆ ಭಾವಪೂರ್ಣ ವಿದಾಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ವಿಸರ್ಜನೆ ಅಂಗವಾಗಿ ಏರ್ಪಡಿಸಿದ್ದ ಬೃಹತ್ ಶೋಭಾಯಾತ್ರೆ ಗಮನ ಸೆಳೆಯಿತು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು, ಅಭಿಮಾನಿಗಳು ಹಿಂದೂ ಮಹಾ ಗಣಪತಿಯನ್ನು ಶೋಭಾಯಾತ್ರೆ ಮೂಲಕ ಕಳುಹಿಸಿಕೊಟ್ಟರು.

ಶೋಭಾಯಾತ್ರೆ ಅಂಗವಾಗಿ ಕಳೆದ ಒಂದೊಂದು ವಾರದಿಂದ ಕೋಟೆನಾಡು ಚಿತ್ರದುರ್ಗ ನಗರವನ್ನು ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿತ್ತು.

 ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಝಗ ಮಗಿಸುತ್ತಿರುವ ವೈವಿಧ್ಯಮಯ ವಿದ್ಯುತ್ ದೀಪಾಲಂಕಾರಗಳು, ಕೇಸರಿಯನ್ನೇ ಕೋಟೆನಗರಿ ಹೊದ್ದುಕೊಂಡು, ಭಕ್ತರನ್ನು ಕೈ ಬೀಸಿ ಕರೆದಿತ್ತು, ಲಕ್ಷಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಹಿಂದೂ ಮಹಾಗಣಪನಿಗೆ ತಮ್ಮ ಭಕ್ತಿ ಸಮರ್ಪಿಸಿದರು.

ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಓಂ ಶ್ರೀ ಆಂಜನೇಯ ಸ್ವಾಮಿ ಭಾವಚಿತ್ರದ ಬೃಹತ್ ಧ್ವಜಗಳು, ಮದಕರಿ ವೃತ್ತದಲ್ಲಿನ  ರಾಜ ವೀರ ಮದಕರಿನಾಯಕ ಪ್ರತಿಮೆ ಯನ್ನು ಕೈಲಾಸ ಪರ್ವತದ ಅಲಂಕಾರ ಮತ್ತು ಗಾಂಧಿ ವೃತ್ತದಲ್ಲಿನ ಸುಮಾರು ೨೦ ಅಡಿ ಮೇಲ್ಬಾಗದಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿ ಜನರ ಗಮನ ಸೆಳೆಯುತ್ತಿತ್ತು.

ಶೋಭಾಯಾತ್ರೆಯಲ್ಲಿ ಚಿತ್ರದುರ್ಗ ಅಲ್ಲದೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾಧಿಗಳು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಕ್ಷಣಕ್ಕೊಮ್ಮೆ ಪಟಾಕಿ ಶಬ್ದಗಳು, ಆಕಾಶದಲ್ಲಿ ಅರಳುತ್ತಿದ್ದ ಪಟಾಕಿಗಳನ್ನು ನೋಡಿ ಕಣ್ಮುಂಬಿಕೊಂಡರು.

ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳು ತಮ್ಮ ತಲೆಗೆ ಕೇಸರಿ ಟೋಪಿ, ಕೊರಳಿಗೆ ಕೇಸರಿ ಶಾಲು, ಕೈಯಲ್ಲಿ ಕೇಸರಿ ಧ್ವಜ, ಇದರಲ್ಲಿ ಹನುಮ ಶ್ರೀರಾಮನ ಭಾವ ಚಿತ್ರ ಇದ್ದಿದ್ದು ಕಂಡು ಬಂದಿತು. ಕೆಲ ಯುವಕರ ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತಿರುಗಿಸುತ್ತಾ ಇದ್ದಿದು ಕಂಡು ಬಂದಿತು.

ಚಿತ್ರದುರ್ಗದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದರು.
ನಗರದಾದ್ಯಂತ ೬ ತಂಡಗಳ ಬಾಂಬ್ ಸ್ಕ್ವಾಡ್ ಶ್ವಾನ ದಳದ ವತಿಯಿಂದ ಸೂಕ್ಷ್ಮ ಸ್ಥಳಗಳಾದ ಬಸ್ ನಿಲ್ದಾಣ
, ಮಾಲ್, ಲಾಡ್ಜ್, ಸಿನಿಮಾ ಮಂದಿರ, ಪ್ರಮುಖ ಹೋಟೆಲ್, ಜನ ಜಂಗುಳಿ ಪ್ರದೇಶಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಬಾಂಬ್ ಸ್ಕ್ವಾಡ್ ಜೊತೆ ಭೇಟಿ ನೀಡುತ್ತಿದ್ದ ಪೊಲೀಸರು ಅಪರಿಚಿತರು,

ಹೊಸಬರ ಓಡಾಟದ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದರು. ಇಡೀ ಶೋಭಾಯಾತ್ರೆಯಲ್ಲಿ ಎಲ್ಲೂ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿ ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಶೋಭಾಯಾತ್ರೆ ಯಶಸ್ವಿಯಾಗಲು ಪೊಲೀಸರಿಟ್ಟಿದ್ದ ಹದ್ದಿನ ಕಣ್ಣುಗಳು ಸಹಕಾರಿಯಾಗಿತು.

ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಜನರ ಹಸಿವು ನೀಗಿಸುವ ಸಲುವಾಗಿ ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳು ಪಲಾವ್, ಪುಳಿಯೋಗರೆ, ಚಿತ್ರಾನ್ನ, ಮೊಸರು ಅನ್ನ, ನೀರು, ಐಸ್ ಕ್ರೀಂ, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು.

ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರ ರಕ್ಷಣೆ ಹಾಗೂ ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು ೩೫೦೦ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ೧೦ ಕೆಎಸ್ ಆರ್ ಪಿ, ೧೨ ಡಿಎಆರ್ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಐಜಿಪಿ, ಎಸ್ಪಿ, ೬ ಎಎಸ್ಪಿ, ೧೬ ಡಿವೈಎಸ್ಪಿ ಸೇರಿ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡಿದರು.

ಶೋಭಾಯಾತ್ರೆಯಲ್ಲಿ ನಾಡಿನ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿದವು. ಇನ್ನೂ ೩ ಡಿಜೆಗಳ ಶಬ್ದಕ್ಕೆ ಯುವಕರು ಹಾಗೂ ಯುವತಿಯರು ಕುಣಿದು ಕುಪ್ಪಳಿಸಿದರು.

ಮುಕ್ತಿ ಭಾವುಟ ಹರಾಜು-
ಹಿಂದೂ ಮಹಾಗಣಪತಿಯ ಮುಕ್ತಿ ಭಾವುಟವನ್ನು ಹರಾಜು ಹಾಕಿದ್ದು ೨.೦೫ ಲಕ್ಷ ರೂ.ಗಳಿಗೆ ಹನುಮನಹಳ್ಳಿ ಮಂಜುನಾಥ್ ಹರಾಜ್ ಕೂಗಿ ತನ್ನದಾಗಿಸಿಕೊಂಡರು.
ಗಣಪತಿಯ ಹೂವಿನ ಹಾರವನ್ನು ೧.೬೦ ಲಕ್ಷ ರೂ. ಗಳಿಗೆ ತೊರೇಮನಹಳ್ಳಿ ತಿಪ್ಪೇಸ್ವಾಮಿ,

ಗಣಪತಿಗೆ ಹಾಕಿದ ನೋಟಿನ ಹಾರವನ್ನು ೨.೫೦ ಲಕ್ಷ ರೂ.ಗಳಿಗೆ ಕೆ.ಜಿ.ಟಿ.ಗುರುಮೂರ್ತಿ, ಪುರಿ ಜಗನ್ನಾಥ್ ದೇವಾಲಯದ ಮಾದರಿಯನ್ನು ೨.೨೫ ಲಕ್ಷ ರೂ.ಗಳಿಗೆ ಕೆ.ಸಿ.ನಾಗರಾಜ್, ಹಣ್ಣಿನ ಪುಟ್ಟಿಯನ್ನು ೬೦ ಸಾವಿರ ರೂಗಳಿಗೆ ಉಮೇಶ್ ಕಾರಜೋಳ, ಗಣಪತಿಯ ಪ್ರಸಾದ ಲಡ್ಡು ೭೦ ಸಾವಿರ ರೂಗಳಿಗೆ ಶ್ಯಾಮಿಯಾನ ಮೋಹನ್, ಗಣಪತಿಯ ಭಾವಚಿತ್ರವನ್ನು ೬೦ ಸಾವಿರ ರೂಗಳಿಗೆ ಮಂಜಣ್ಣ ಹಾಗೂ ಮೆಕ್ಕೆಜೋಳದ ಹಾರವನ್ನು ೪೦ ಸಾವಿರ ರೂಗಳಿಗೆ ವಿಶ್ವಬಂಧು ಕೊಟ್ರೇಶ್ ರವರು ಬಹಿರಂಗ ಹರಾಜಿನಲ್ಲಿ ಕೂಗಿ ಪಡೆದುಕೊಂಡಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";