ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೊಟ್ಟ ಮೊದಲ ಉತ್ಪಾದನಾ ಮಂಥನ ಯಶಸ್ವಿ. ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ನಿರ್ಮಾಣ ಮಾಡುವ ನಮ್ಮ ದೃಢ ಸಂಕಲ್ಪಕ್ಕೆ ಉತ್ಪಾದನಾ ಮಂಥನ ಕಾರ್ಯಕ್ರದ ಮೂಲಕ ಸ್ಪಷ್ಟ ನೀಲನಕ್ಷೆ ಸಿದ್ಧವಾಗಿದೆ. ಮುಂದಿನ 5 ವರ್ಷಗಳಲ್ಲಿ 7.5 ಲಕ್ಷ ಕೋಟಿ ರೂ. ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ನಮ್ಮ ಗುರಿಗೆ ಮತ್ತಷ್ಟು ಬಲ ಬಂದಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲಿಸಲು, ಏರೋಸ್ಪೇಸ್ & ಡಿಫೆನ್ಸ್, ಎಲೆಕ್ಟ್ರಾನಿಕ್ಸ್ & ಸೆಮಿಕಂಡಕ್ಟರ್, ಕ್ಯಾಪಿಟಲ್ ಗೂಡ್ಸ್ & ರೋಬೋಟಿಕ್ಸ್, ಆಟೋ ಮತ್ತು ಇವಿ ವಾಹನ, ಜವಳಿ & ಪಾದರಕ್ಷೆ ಮತ್ತು ಆಟಿಕೆ ಮತ್ತು FMCG ಉತ್ಪನ್ನ ವಲಯಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು.
ಈ ಪ್ರಮುಖ 6 ವಲಯಗಳ ಪ್ರಗತಿಗೆ ಪ್ರತ್ಯೇಕ ಕಾರ್ಯಪಡೆಗಳನ್ನು ರಚಿಸಲಾಗುತ್ತಿದ್ದು ಇದಕ್ಕೆ ಅಗತ್ಯವಾದ ಸಮಗ್ರ ಟೌನ್ ಶಿಪ್ ಗಳನ್ನು ಹಾಗೂ ಇನ್ನಿತರ ಅಗತ್ಯದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಉತ್ಪಾದನಾ ಮಂಥನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು ರಚನಾತ್ಮಕ ಸಲಹೆ ನೀಡಿದ್ದು ಅವುಗಳನ್ನು ಸರ್ಕಾರದ ಕ್ರಿಯಾಯೋಜನೆಯ ಭಾಗವನ್ನಾಗಿ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮವೂ ಕೇವಲ ಚರ್ಚೆಯ ವೇದಿಕೆಯಾಗಿರುವುದಷ್ಟೇ ಅಲ್ಲದೆ ರಾಜ್ಯದ ಯುವ ಸಮುದಾಯಕ್ಕೆ ಜಾಗತಿಕ ಮಟ್ಟದ ಅವಕಾಶಗಳ ಬಾಗಿಲು ತೆರೆಯುವ ಹೊಸ ಅಧ್ಯಾಯವಾಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.