ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮುಚ್ಚಿ ಹಾಕಲು ಗಂಭೀರ ಪ್ರಯತ್ನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟ ಹಗರಣಗಳ ಗಂಭೀರ ಚರ್ಚೆಯ ದಿಕ್ಕು ತಪ್ಪಿಸಿ ಜನರ ಗಮನ ಬೇರೆಡೆ ಸೆಳೆಯಲು ಕೆಲವು ಘಟನೆಗಳನ್ನು ಸೃಷ್ಠಿಮಾಡುತ್ತಿದೆ ಅದರ ಒಂದು ಭಾಗವಾಗಿ  ಹಿಂದೂ ಸಮುದಾಯದ ಭಾವನೆ ಕೆರಳಿಸಲು ಗಣೇಶೋತ್ಸವ ಮೆರವಣಿಗೆಗಳ ಮೇಲೆ ದಾಳಿ ನಡೆಸುವ ಮತಾಂಧ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಆರೋಪಿಸಿದ್ದಾರೆ.

ಗಣೇಶೋತ್ಸವಗಳ ಮೇಲೆ ಕ್ಷುದ್ರ ಶಕ್ತಿಗಳ ಅಟ್ಟಹಾಸ ನಿರಂತರವಾಗಿ ಸಾಗಿದೆ ನಾಗಮಂಗಲದ ಘಟನೆ ಮಾಸುವ ಮುನ್ನವೇ ತಡರಾತ್ರಿ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ದಾಳಿ ನಡೆದಿರುವ ಘಟನೆ ಗಮನಿಸಿದರೆ ಕಾನೂನು ಸುವ್ಯವಸ್ಥೆಯ ವಿಫಲತೆ ಹಾಗೂ ಗೃಹ ಇಲಾಖೆಯ ಸಂಪೂರ್ಣ ನಿಷ್ಕ್ರಿಯತೆ ಎದ್ದುಕಾಣುತ್ತದೆ, ಹಿಂದೂ ಉತ್ಸವ ಹಾಗೂ ಆಚರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತಾಳಿರುವ ಉಪೇಕ್ಷೆ ಧೋರಣೆಯನ್ನು ಸರಣೀ ಘಟನೆಗಳು ಸಾಕ್ಷಿಕರಿಸುತ್ತಿವೆ ಎಂದು ಅವರು ದೂರಿದ್ದಾರೆ.

ಘಟನೆಯ ವೀಡಿಯೋ ತುಣುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತಾಂಧ ಕಿಡಿಗೇಡಿಗಳು ಕಾಂಗ್ರೆಸ್ ಸರ್ಕಾರ ತಮ್ಮ ರಕ್ಷಣೆಗಿದೆ ಎಂಬ ನಂಬಿಕೆಯಲ್ಲೇ ದಾಳಿ ನಡೆಸುತ್ತಿರುವ ಪರಿ ಗೋಚರವಾಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

ದಾವಣಗೆರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುರ್ಘಟನೆಗೆ ಕಾರಣರಾದ ಮತಾಂಧರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೇ ನಾಗಮಂಗಲದಂತೆ ಅಮಾಯಕ ಹಿಂದೂ ಸಮುದಾಯಕ್ಕೆ ತೊಂದರೆ ನೀಡಿದರೆ ರಾಜ್ಯ ಬಿಜೆಪಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಪುಂಡ-ಪೋಕರಿಗಳ, ವಿಧ್ವಂಸಕ ಮನಸ್ಥಿತಿಯ ದೇಶ ದ್ರೋಹಿಗಳ ತಾಣವಾಗುತ್ತಿರುವ ರಾಜ್ಯದಲ್ಲಿ ನಾಗರಿಕ ಸಮಾಜ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದ ಆತಂಕದ ನೆಲೆ ಸೃಷ್ಠಿಯಾಗುತ್ತಿದೆ.

ಸಮಾಜಕ್ಕೆ ಸುರಕ್ಷತೆಯ ವಾತಾವರಣ ನಿರ್ಮಿಸುವ ಬದ್ಧತೆ ಹಾಗೂ ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದ್ದಂತಿಲ್ಲ, ಈ ಸರ್ಕಾರ ಆಡಳಿತ ಬಿಟ್ಟು ತೊಲಗುವುದೇ ಸದ್ಯಕ್ಕೆ ಕಾಣುತ್ತಿರುವ ಪರಿಹಾರ ಎಂದು ವಿಜಯೇಂದ್ರ ತಿಳಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";