ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನೊಂದಾಯಿತ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಟೆಂಡರ್ ಪಡೆದ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಕಂಪನಿಗಳ ವಿರುದ್ದ ಸುಮೋಟೋ ಪ್ರಕರಣ ದಾಖಲಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಕಾರ್ಮಿಕ ಇಲಾಖೆ ಎದುರು ಮಂಗಳವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿ ಕಾರ್ಮಿಕ ಅಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಯಿತು.
ಕಾರ್ಮಿಕರ ಹಣ ನುಂಗುತ್ತಿರುವ ಕಲ್ಯಾಣ ಮಂಡಳಿ ಹಾಗೂ ಸಚಿವ ಸಂತೋಷ್ ಲಾಡ್ ವಿರುದ್ದ ಧರಣಿನಿರತ ಕಾರ್ಮಿಕರು ಧಿಕ್ಕಾರಗಳನ್ನು ಕೂಗಿದರು.
ಸೆಸ್ ವಸೂಲಿ ಪ್ರಾಧಿಕಾರ ರಚನೆಯಾಗಬೇಕು. ರಾಜ್ಯದಲ್ಲಿ ಈ ಹಿಂದೆ ನಿರ್ಮಾಣವಾಗಿರುವ ಎಲ್ಲಾ ಕಾಮಗಾರಿಗಳನ್ನು ಮೌಲ್ಯಮಾಪನಗೊಳಿಸಲು ಅಧಿಕಾರಿಗಳನ್ನು ನೇಮಿಸಿ ಶೇ.೨ ರಂತೆ ಬಡ್ಡಿ ಸಹಿತ ಸೆಸ್ ವಸೂಲಿ ಮಾಡಬೇಕು. ಬಿಜೆಪಿ.ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಮುಂದುವರೆಸಬೇಕು.
ನೊಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ ಐದು ಲಕ್ಷ ರೂ. ಹಾಗೂ ಕಟ್ಟಡ ಕಾರ್ಮಿಕರು ಮನೆಗಳನ್ನು ನಿರ್ಮಿಸಿಕೊಳ್ಳಲು ಐದು ಲಕ್ಷ ರೂ.ಗಳನ್ನು ನೀಡಬೇಕು. ಕಾರ್ಮಿಕರ ಪಿಂಚಣಿಯನ್ನು ಐದು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಹೆರಿಗೆ ಭತ್ಯೆ ನಗದು ಐವತ್ತು ಸಾವಿರ ರೂ. ಖಾತೆಗೆ ನೇರ ವರ್ಗಾವಣೆಯಾಗಬೇಕು. ಕಾರ್ಮಿಕರ ಮಕ್ಕಳ ವಿವಾಹಕ್ಕೆ ಓಂದು ಲಕ್ಷ ರೂ.ಕೊಡಬೇಕೆಂದು ಧರಣಿ ನಿರತರು ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷರುಗಳಾದ ಕೆ.ಗೌಸ್‌ಪೀರ್,
ನಾದಿಆಲಿ, ನರಸಿಂಹಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಖಜಾಂಚಿ ಈಶ್ವರಪ್ಪ ಡಿ, ಸಹ ಕಾರ್ಯದರ್ಶಿ ಇಮಾಮ್ ಮುಹಿಮುದ್ದಿನ್, ಗೌಸ್‌ಖಾನ್, ಚಾಂದ್‌ಪೀರ್, ಸಲೀಂ, ಈ.ರಾಜಪ್ಪ, ತಿಮ್ಮಯ್ಯ ಎಂ, ರಾಜಪ್ಪ, ರಫೀಕ್, ಫೈರೋಜ್, ಪ್ರಸನ್ನ ಡಿ, ರಘು, ಉಮೇಶ್ ಎನ್, ಹೇಮಂತು, ನಿಂಗರಾಜು, ವೆಂಕಟೇಶಪ್ಪ ಎಲ್, ಮಹಂತೇಶ್ ಎಂ, ಟಿ.ಚಂದ್ರಪ್ಪ, ವೃಷಬೇಂದ್ರಪ್ಪ ಹೆಚ್. ಇನ್ನು ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.

