ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿಂದಾದ ಏರಿಳಿತಗಳು, ಆದಾಯ ತೆರಿಗೆ ಕಾಯ್ದೆ-2025 ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರ ನಿಯಮಗಳು ಮತ್ತು ತೆರಿಗೆ ಮರುಪಾವತಿ ಕುರಿತಾದ ಫಾರ್ಮ್‌ಗಳ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಆರು ದಶಕಗಳಷ್ಟು ಹಳೆಯದಾದ ತೆರಿಗೆ ಕಾನೂನಿಗೆ ಬದಲಾವಣೆ ತರಲಾಗಿದೆ. 2026-27ರ ಬಜೆಟ್‌ನಲ್ಲಿ ತೆರಿಗೆ ನಿಯಮಗಳಿಗೆ ತಂದಿರುವ ಬದಲಾವಣೆಗಳನ್ನು ಈ ಹೊಸ ಕಾಯ್ದೆಯಲ್ಲಿ ಸೇರ್ಪಡೆಗೊಳಿಲಾಗುವುದು ಎಂದು ವಿತ್ತ ಸಚಿವರು ಹೇಳಿದರು.
ನೇರ ತೆರಿಗೆ ಸಂಹಿತೆಯು ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದೆ. ಆದಾಯ ತೆರಿಗೆ ಕಾಯ್ದೆ-2025 ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ಫಾರ್ಮ್‌ಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು, ತೆರಿಗೆದಾರರು ಅದರ ಅವಶ್ಯಕತೆಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಕಷ್ಟು ಸಮಯ ಇರಲಿದೆ ಎಂದು ಸಚಿವರು ತಿಳಿಸಿದರು. ಫಾರ್ಮ್‌ಗಳನ್ನು ಮರು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಸಾಮಾನ್ಯ ನಾಗರಿಕರು ಯಾವುದೇ ತೊಂದರೆಯಿಲ್ಲದೆ ಕಾಯ್ದೆಯನ್ನು ಅನುಸರಿಸಬಹುದು ಎಂದು ವಿವರಿಸಿದರು.
ತೆರಿಗೆ ಬದಲಾವಣೆಯಿಲ್ಲ:
2025ರ ಐಟಿ ಕಾನೂನು ಪ್ರಕಾರ, ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೇರ ತೆರಿಗೆ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಸರಳವಾಗಿದೆ. ಅಸ್ಪಷ್ಟತೆಗಳನ್ನು ತೆಗೆದುಹಾಕಿದ್ದು, ಮೊಕದ್ದಮೆಗಳ ವ್ಯಾಪ್ತಿಯು ಕಡಿಮೆಯಾಗಲಿದೆ. ಅಲ್ಲದೆ, 1961ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ, ಈಗ ತೆರಿಗೆ ಸೆಕ್ಷನ್ಗಳು ಸುಮಾರು ಶೇಕಡಾ 50ರಷ್ಟು ಕಡಿಮೆಯಾಗಿವೆ ಎಂದು ಸಚಿವರು ತಿಳಿಸಿದರು.
ಹೊಸ ಕಾನೂನು ಮೌಲ್ಯಮಾಪನ ವರ್ಷ ಮತ್ತು ಹಿಂದಿನ ವರ್ಷದ ನಡುವಿನ ವ್ಯತ್ಯಾಸವನ್ನು ತೆಗೆದುಹಾಕುವ ಮೂಲಕ ತೆರಿಗೆ ಸಮಯ ಸರಳಗೊಳಿಸಲಿದೆ. ಅದನ್ನು ಒಂದೇ ‘ತೆರಿಗೆ ವರ್ಷ‘ ಎಂಬ ಚೌಕಟ್ಟಿನೊಂದಿಗೆ ಬದಲಾಯಿಸಲಿದೆ. ಯಾವುದೇ ದಂಡ ಶುಲ್ಕಗಳಿಲ್ಲದೆ, ಗಡುವಿನ ನಂತರ ಐಟಿಆರ್‌ಸಲ್ಲಿಸಿದರೂ ಸಹ ತೆರಿಗೆದಾರರು ಟಿಡಿಎಸ್ ಮರುಪಾವತಿ ಪಡೆಯಲು ಅವಕಾಶವಿರಲಿದೆ.
ಐಟಿ ರಿಟರ್ನ್ಸ್ ಮಿತಿ ವಿಸ್ತರಿಸಿದ ಕೇಂದ್ರ;
ನಾಮಮಾತ್ರ ಶುಲ್ಕ ಪಾವತಿಸುವ ಪರಿಷ್ಕೃತ ಆದಾಯ ತೆರಿಗೆ (ಐ-ಟಿ) ರಿಟರ್ನ್ಸ್ ಸಲ್ಲಿಸುವ ಸಮಯ ಮಿತಿಯನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿ ಸಲ್ಲಿಸಲು ಈ ಮೊದಲು ಇದ್ದ ಡಿಸೆಂಬರ್ 31 ರ ಗಡವು ಬದಲಿಗೆ ಈಗ ಮಾರ್ಚ್ 31 ರವರೆಗೆ ಅವಕಾಶ ನೀಡಲಾಗಿದೆ.
ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ರಿಂದ ಮಾರ್ಚ್ 31ರವರೆಗೆ ಅವಕಾಶವಿರಲಿದೆ. ಉದಾರೀಕೃತ ರವಾನೆ ಯೋಜನೆಯಡಿ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ಟಿಸಿಎಸ್ ದರವನ್ನು ಶೇಕಡಾ 5 ರಿಂದ ಶೇಕಡಾ 2ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ತಿಳಿಸಿದರು.

