ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಹಣದ ಹಡವೆಯಲ್ಲಿ ಓಡುವ ಸಮಾಜಕ್ಕೆ ಎಚ್ಚರಿಕೆ – ರೈತನನ್ನು ಮರೆತರೆ ಹಸಿವಿನ ಭವಿಷ್ಯ!”. ಇಂದು ಜನರ ಓಟ ಒಂದೇ ದಿಕ್ಕಿನಲ್ಲಿ ಇದೆ. ಹಣ, ಹಣ ಮತ್ತು ಇನ್ನೂ ಹೆಚ್ಚು ಹಣ!. ಮಾನವೀಯತೆ, ಮೌಲ್ಯಗಳು, ಕೃಷಿ, ಅನ್ನದ ಮಹತ್ವ ಇವೆಲ್ಲ ಹಿಂಬದಿಗೆ ಸರಿದಿವೆ.
ಈ ಹಡವೆ ಒಂದಲ್ಲೊಂದು ದಿನ ಮಾನವನ ಬದುಕಿಗೇ ಮಾರಕವಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಹಣವೇ ಜೀವನವಲ್ಲ… ಅನ್ನವೇ ಜೀವನ-
ರೈತನನ್ನು ಕಡೆಗಣಿಸಿದರೆ ಏನಾಗುತ್ತದೆ?. ಹೊಲದಲ್ಲಿ ಬೆವರು ಸುರಿಸುವ ರೈತನನ್ನು ನಾವು ಕೇವಲ ಮತದಾರನಾಗಿ ನೋಡುತ್ತಿದ್ದೇವೆ.
ಅವನ ಬೆಳೆಗಳಿಗೆ ನ್ಯಾಯಬೆಲೆ ಇಲ್ಲ. ಅವನ ಕಷ್ಟಕ್ಕೆ ಭದ್ರತೆ ಇಲ್ಲ. ಅವನ ಭವಿಷ್ಯಕ್ಕೆ ಖಾತ್ರಿ ಇಲ್ಲ. ಇದರಿಂದ ಏನಾಗುತ್ತದೆ?. ಕೃಷಿಯಿಂದ ಯುವಕರು ದೂರವಾಗುತ್ತಾರೆ. ಭೂಮಿಗಳು ಬತ್ತಲಾಗುತ್ತವೆ. ಉತ್ಪಾದನೆ ಕುಸಿಯುತ್ತದೆ. ಮಾರುಕಟ್ಟೆಯಲ್ಲಿ ಕೊರತೆ ಉಂಟಾಗುತ್ತದೆ. ಕೊರತೆ ಉಂಟಾದಾಗ ಹಣದುಬ್ಬರ ಹೆಚ್ಚುತ್ತದೆ.
ಹಣದುಬ್ಬರ ಹೆಚ್ಚಾದಾಗ ಹಣದ ಮೌಲ್ಯ ಕಾಗದದಷ್ಟೇ ಆಗುತ್ತದೆ. ಇತಿಹಾಸದ ಎಚ್ಚರಿಕೆ. Zimbabwe ದೇಶದಲ್ಲಿ ಹಣದುಬ್ಬರ ಆಕಾಶಕ್ಕೇರಿದಾಗ ಜನರು ಚೀಲ ತುಂಬ ನೋಟು ಹಿಡಿದು ಹೋಗಿ ಒಂದು ರೊಟ್ಟಿ ತರುವ ಸ್ಥಿತಿ ಎದುರಿಸಿದರು.
ಇತ್ತೀಚೆಗೆ ಶ್ರೀಲಂಕ ದೇಶ ಆರ್ಥಿಕ ಸಂಕಷ್ಟದಲ್ಲಿ ಹಣ ಇದ್ದರೂ ಜನರು ಆಹಾರ ಮತ್ತು ಇಂಧನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಹಣ ಇದ್ದರೂ ವಸ್ತು ಇಲ್ಲದ ಸ್ಥಿತಿ. ಹಣ ತಿನ್ನಲಾಗುವುದಿಲ್ಲ. ಹಣವನ್ನು ಬೇಯಿಸಿ ಊಟ ಮಾಡಲಾಗುವುದಿಲ್ಲ. ಹಣದ ಹಡವೆಯಲ್ಲಿ ಓಡುತ್ತಾ ರೈತನನ್ನು ಮರೆತರೆ, ನಾಳೆ ಬೀದಿಯಲ್ಲಿ ಹಣ ಬಿದ್ದಿರಬಹುದು… ಆದರೆ ಅನ್ನದ ಒಂದು ಮುಷ್ಟಿಗೂ ತತ್ತರಿಸಬೇಕಾದ ಸ್ಥಿತಿ ಬರಬಹುದು!
ಅಂತಿಮ ಎಚ್ಚರಿಕೆ- ರೈತ ದೇಶದ ಹೊಟ್ಟೆ ತುಂಬಿಸುವವನು. ಕೃಷಿ ದೇಶದ ಜೀವನಾಡಿ. ಹಣದ ಮೇಲೆ ಮಾತ್ರ ನಂಬಿಕೆ ಇಟ್ಟ ಸಮಾಜಗಳು ಕುಸಿದ ಸಾಕಷ್ಟು ಉದಾಹರಣೆಗಳು ಇವೆ…..

ಅನ್ನದ ಮೇಲೆ ನಿಂತ ಸಮಾಜಗಳು ಮಾತ್ರ ಉಳಿದಿವೆ……ಹಣದ ದಾಸರಾಗಬೇಡಿ…ಅನ್ನದ ಮೌಲ್ಯ ಅರಿತು ರೈತನನ್ನು ಉಳಿಸಿ!…..
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

