ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಪದ ಸಂಸ್ಕ್ರತಿ ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ”. ಪದ ಸಂಸ್ಕೃತಿ ಮರೆತ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕೀಳು ಮಟ್ಟದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ….’ಎಂಬಂತೆ ಸಂತೋಷ್ ಲಾಡ್ ಅವರ ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಮಾತುಗಳು ಹೊಮ್ಮತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಕರ್ನಾಟಕ ಸರ್ಕಾರದ ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿ ಕುಳಿತು ಅದರ ಘನತೆಗೆ ಕೊಚ್ಚೆ ಬಳಿಯುವ ಮಾತುಗಳನ್ನಾಡುತ್ತಿರುವ ಸಂತೋಷ್ ಲಾಡ್ ರಂಥವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳಲು ಮಾತ್ರ ಲಾಯಕ್ಕಾಗಿದ್ದಾರೆಯೇ ಹೊರತು, ಹೆಮ್ಮೆಯ ಕರ್ನಾಟಕ ಸರ್ಕಾರದ ಸಚಿವರು ಎಂದು ಹೇಳಿಕೊಳ್ಳುವ ಯಾವ ಯೋಗ್ಯತೆಯೂ ಇಲ್ಲ ಎನ್ನುವುದನ್ನು ಅವರ ಈ ಹಿಂದಿನ ಮಾತುಗಳು ಹಾಗೂ ನಡವಳಿಕೆಗಳು ಸಾಕ್ಷೀಕರಿಸಿದ್ದವು.
ದೆಹಲಿ ಬಾಂಬ್ ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಬೇಜವಾಬ್ದಾರಿ ಟೀಕೆ ಮಾಡುವ ಭರದಲ್ಲಿ ಜನರಿಗೆ ಕಾಫಿ, ಟೀ ಏಕೆ ಕುಡಿಸ್ತೀರಾ……. ಕುಡಿಸಿ ಎಂಬ ಕೀಳು ಮಟ್ಟದ ಪದ ಬಳಸುವ ಮೂಲಕ ಕನ್ನಡದ ಪದ ಸಂಸ್ಕ್ರತಿಯನ್ನು ಮಲಿನಗೊಳಿಸಿದ್ದಾರೆ, ಕನ್ನಡಿಗರ ಸಂಸ್ಕಾರ ನಡವಳಿಕೆಯನ್ನು ಅವಮಾನಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ತಮ್ಮ ಸರ್ಕಾರದ ಘನತೆಯ ಕುರಿತು ಕನಿಷ್ಠ ಬದ್ಧತೆಯಿದ್ದರೆ ಈ ಕೂಡಲೇ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾ ಗೊಳಿಸುವ ಮೂಲಕ ರಾಜ್ಯದ ಗೌರವ ಉಳಿಸಲಿ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.

