ತಾಯ್ನಾಡಿಗೆ ಕನ್ನಡಿಗರನ್ನ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಶ್ಮೀರ ಪ್ರವಾಸಕ್ಕೆಂದು ತೆರಳಿರುವ
40ಕ್ಕೂ ಅಧಿಕ ಕನ್ನಡಿಗರು ಭಯೋತ್ಪಾದಕ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿಯೊಬ್ಬ ಕನ್ನಡಿಗನನ್ನು ಮರಳಿ ರಾಜ್ಯಕ್ಕೆ ಕ್ಷೇಮವಾಗಿ ಕರೆತರುವ ಸಂಕಲ್ಪದೊಂದಿಗೆ ನಮ್ಮ ಸರ್ಕಾರವು ಕಾರ್ಯಾಚರಣೆಗೆ ಇಳಿದಿದೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಭಯೋತ್ಪಾದಕ ದಾಳಿಯಲ್ಲಿ ಹಲವು ಅಮಾಯಕರು ಬಲಿಯಾದ ಈ ದುಃಖದ ಗಳಿಗೆಯಲ್ಲಿ ನೊಂದ ಜನರ ಜೊತೆ ನಾವು ನಿಂತಿದ್ದೇವೆ.

ತಮ್ಮವರನ್ನು ಕಳೆದುಕೊಂಡು ಪರಿತಪಿಸುತ್ತಿರುವ ಜೀವಗಳನ್ನು ಸಾಂತ್ವನಿಸುವ ಜೊತೆಗೆ ಮೃತರ ಶವಗಳನ್ನು ಅವರ ಮನೆಗೆ ತಲುಪಿಸುವ ಕಾರ್ಯವನ್ನು ಕೂಡ ಸಚಿವರಾದ ಸಂತೋಷ್ ಲಾಡ್ ಅವರು ಅತ್ಯಂತ ಶ್ರದ್ಧಾಪೂರ್ವಕವಾಗಿ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ನೆರವಿನ ನಿರೀಕ್ಷೆಯಲ್ಲಿರುವ ಎಲ್ಲ ಕನ್ನಡಿಗರನ್ನು ನಮ್ಮ ಸರ್ಕಾರ ತಲುಪಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಹಾಗೂ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ಪತ್ನಿ ಸುಜಾತ ಅವರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದ್ದೇನೆ.

ಉಗ್ರರ ಈ ಹೇಯ ಕೃತ್ಯದಲ್ಲಿ ಮಡಿದವರ ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರಾದ ಕನ್ನಡಿಗರ ಶವಗಳನ್ನು ನಾಡಿಗೆ ತಲುಪಿಸುವ, ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುವ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಮ್ಮ ಸರ್ಕಾರ ನಿರ್ವಹಿಸುತ್ತಿದೆ. ಸಚಿವರಾದ ಸಂತೋಷ್ ಲಾಡ್ ಅವರು ಈ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದು, ನೊಂದವರನ್ನು ಸಂತೈಸಿ, ಧೈರ್ಯತುಂಬಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿ ಜೊತೆ ನಿಂತಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹವನ್ನು ತಾಯ್ನಾಡಿಗೆ ಮರಳಿ ತರಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಿಎಂ ತಿಳಿಸಿದರು.

ವಿಮಾನದ ಮೂಲಕ ಭರತ್‌ಭೂಷಣ್‌ಅವರ ಮೃತದೇಹ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಮಂಜುನಾಥ್‌ರಾವ್‌ಅವರ ಮೃತದೇಹ ದೆಹಲಿ, ಬೆಂಗಳೂರು ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ ಮುಖ್ಯಮಂತ್ರಿಗಳು ತಿಳಿಸಿದರು.

Share This Article
error: Content is protected !!
";