ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು..

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು…….
ವಿಷದ ಹಾಲಿಗೆ ಅಮೃತ ಸಿಂಚನ…….

ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ…….
ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು…..

ರಾಮ ರಹೀಮರ ಹೆಣಕ್ಕೆ
ತಾಯಿ ಕರುಳೇ ಪಣಕ್ಕೆ…….

ದುಷ್ಟರೆಲ್ಲಾ ಬಲಶಾಲಿಗಳೇ
ಸತ್ತವರೆಲ್ಲಾ ಬಡವರೇ……

ಒಂದೇ ಬಳ್ಳಿಯ ಹೂವುಗಳು
ಒಂದೇ ತಾಯಿಯ ಮಕ್ಕಳು
ಒಂದೇ ದೋಣಿಯ ಪಯಣಿಗರು……..

ಅದಕ್ಕಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ
ಬನ್ನಿ ಬನ್ನಿ………

ಸಿನಿಮಾ ಮಾಡೋಣ ಬನ್ನಿ
ಹೊಡೆದಾಟಗಳಿಲ್ಲದ – ರಕ್ತ ಚೆಲ್ಲದ – ಕುತಂತ್ರಗಳಿಲ್ಲದ –
ಆಕರ್ಷಕ – ಸೃಜನಾತ್ಮಕ – ಮನೋರಂಜನಾತ್ಮಕ –
ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ……

ಸಾಹಿತ್ಯ ರಚಿಸೋಣ ಬನ್ನಿ,
ದ್ವೇಷಕಾರದ – ವಿಷಕಕ್ಕದ – ಪ್ರತಿಷ್ಠೆ ಮೆರೆಯದ –
ಚೆಂದದ ಭಾಷೆಯ – ಪ್ರೀತಿಯ ಚುಂಬಕದ – ಮಾನವೀಯ ಬರಹ……

ಚಿತ್ರ ಬಿಡಿಸೋಣ ಬನ್ನಿ,
ಆತ್ಮವಂಚನೆಯಿಲ್ಲದ – ಬೆಂಕಿಯುಗುಳದ
ಅಶ್ಲೀಲವಲ್ಲದ – ಪ್ರಕೃತಿಯ ಮಡಿಲಿನ
ಸೌಂದರ್ಯದ ಬೀಡಿನ – ಮನಮೋಹಕ ದೃಶ್ಯ……

ಸಂಗೀತ ನುಡಿಸುತ್ತಾ ಹಾಡೋಣ ಬನ್ನಿ,
ಅಹಂಕಾರಗಳಿಲ್ಲದ – ಪಂಥಬೇದಗಳಿಲ್ಲದ
ಕೃತಿಮತೆಯಿಲ್ಲದ – ಮನಕೆ ಮುದನೀಡುವ-
ಆಹ್ಲಾದಕರ – ಆರಾಧನಾ ಭಾವದಿಂದ……

ಪರಿಸರ ಉಳಿಸೋಣ ಬನ್ನಿ,
ವಿಷಗಾಳಿಯಿಲ್ಲದ – ಕಲ್ಮಶನೀರಲ್ಲದ
ಆಹಾರ ಕಲಬೆರಕೆಯಾಗದ – ಹಚ್ಚಹಸಿರಿನ
ಸ್ವಚ್ಚ ಗಾಳಿಯ – ಶುಧ್ಧ ನೀರಿನ ಪ್ರಕೃತಿ…….

ಸಂಘಟಿತರಾಗೋಣ ಬನ್ನಿ,
ಸ್ವಾರ್ಥಿಗಳಾಗದ – ಘರ್ಷಣೆಗಳಿಲ್ಲದ
ಸೇವಾಮನೋಭಾವದ -ತ್ಯಾಗದ
ಪ್ರಾಮಾಣಿಕತೆಯ-ಅರ್ಪಣಾ ಮನೋಭಾವದ ಸಂಸ್ಥೆಯೊಂದಿಗೆ……

ಆಡಳಿತ ನಡೆಸೋಣ ಬನ್ನಿ,
ಭ್ರಷ್ಟತೆಯಿಲ್ಲದ – ದೌರ್ಜನ್ಯಗಳಿಲ್ಲದ
ಅನ್ಯಾಯ ಮಾಡದ – ಸಮಾನತೆ-ಸ್ವಾತಂತ್ರ್ಯ
ಸೋದರತೆಯ ಜೀವಪರ ಸರ್ಕಾರ……..

ಬದುಕೋಣ ಬನ್ನಿ,
ಚಿಂತೆಗಳಿಲ್ಲದ – ಜಿಗುಪ್ಸೆಗಳಿಲ್ಲದ – ನೋವುಗಳಿಲ್ಲದ –
ನೆಮ್ಮದಿಯ – ಆನಂದದಾಯಕ – ಸುಖದ ಜೀವನ…….

ಮನುಷ್ಯರಾಗೋಣ ಬನ್ನಿ,
ಕಪಟತನವಿಲ್ಲದ – ದುರ್ಬುದ್ಧಿಗಳಿಲ್ಲದ – ಮನೋವಿಕಾರಗಳಿಲ್ಲದ –
ಜ್ಞಾನಸ್ಥ – ಧ್ಯಾನಸ್ಥ – ಯೋಗಸ್ಥ – ಕರ್ಮಸ್ಥ – ಜೀವಿಗಳಾಗಿ………
ಇದು ತಿರುಕನ ಕನಸಲ್ಲ ………ನನಸಾಗಬಹುದಾದ ನಾಗರೀಕತೆಯ ಹೊಸ ಮನ್ವಂತರ ……………
ಕವಿತೆ:ವಿವೇಕಾನಂದ. ಎಚ್.ಕೆ.
9844013068………..

 

Share This Article
error: Content is protected !!
";