ಅನಾಥವಾದ ದೇವರಾಜ ಅರಸರ ಪ್ರತಿಮೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ನ್ಯಾಯದ ಹರಿಕಾರ, ಅನಾಥಪ್ರಜ್ಞೆಯ ಸಮಾಜಗಳಿಗೆ ದನಿಯಾದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸರ ಪ್ರತಿಮೆ ಮೈಸೂರಿನಲ್ಲಿ ಅನಾಥ ಪ್ರಜ್ಞೆ ಎದುರಿಸುತ್ತಿದೆ. ಕರ್ನಾಟಕ ರಾಜ್ಯದ ಆಡಳಿತದಲ್ಲಿ ಸಾಮಾಜಿಕ ಹಾಗೂ ಆಡಳಿತ ಸುಧಾರಣೆಗಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಧೀಮಂತ ಮುಖ್ಯಮಂತ್ರಿ ಎಂದು ಕರೆಸಿಕೊಂಡ ಡಿ ದೇವರಾಜ ಅರಸರು ಮೈಸೂರು ಜಿಲ್ಲೆಯಿಂದ ಬಂದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ. 

ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಮೈಸೂರು ಜಿಲ್ಲೆಯಲ್ಲಿ ಅವರನ್ನು ಸ್ಮರಿಸುವ ಯಾವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿಲ್ಲ, ಅವರ ಪ್ರತಿಮೆಯನ್ನಾದರೂ ಸ್ಥಾಪಿಸಿ ಸ್ಮರಿಸಬೇಕೆಂಬ ಉದಾತ್ತ ಉದ್ದೇಶದಿಂದ ಬಿ.ವೈ.ಯಡಿಯೂರಪ್ಪ ಅವರ ಆಡಳಿತ ಕಾಲದಲ್ಲಿ 92 ಲಕ್ಷ ರೂ. ಮಂಜೂರು ಮಾಡಿ ಮೈಸೂರಿನ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅದನ್ನು ಸ್ಥಾಪಿಸಲು ಆದೇಶಿಸಿತ್ತು.

- Advertisement - 

ಆದರೆ ಪ್ರತಿಮೆ ಸಿದ್ದಗೊಂಡಿದ್ದರೂ ಅದಕ್ಕೆ ಅನಾವರಣ ಭಾಗ್ಯ ಕಲ್ಪಿಸುವ ಮನಸ್ಸು ಮಾಡದೇ ಜಿಲ್ಲಾಡಳಿತ ದೇವರಾಜ ಅರಸರ ಬಗ್ಗೆ ತಾತ್ಸಾರ ಧೋರಣೆ ತಳೆದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ನವೆಂಬರ್ ೧ ರ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಕಾರಣರಾದವರು ಡಿ ದೇವರಾಜ ಅರಸರು, ಇದೇ ನವೆಂಬರ್ ೧ ರಂದು ಈ ಪ್ರತಿಮೆ ಅನಾವರಣ ಗೊಳ್ಳುವ ಮೂಲಕ ರಾಜ್ಯೋತ್ಸವವನ್ನು ಮೈಸೂರಿನಲ್ಲಿ ಅರ್ಥಪೂರ್ಣ ಗೊಳಿಸಲಿ, ಇಲ್ಲದಿದ್ದರೆ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಳಿದವರ ದನಿಯಾದ ದೇವರಾಜ ಅರಸರ ಬಗ್ಗೆ ತಾತ್ಸಾರ ಧೋರಣೆ ಇದೆ ಎಂಬ ನಿರ್ಣಯಕ್ಕೆ ಜನರೇ ಬರುತ್ತಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";