ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಒಬ್ಬರಿಗೆ ಹೆರಿಗೆ ಮಾಡಿಸಲು 3 ಸಾವಿರ ರೂ. ಲಂಚ ಪಡೆದಿದ್ದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಸಿ.ಎನ್.ಮಹಾಲಕ್ಷ್ಮಮ್ಮ ಎಂಬವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮೀನ ಪರವೀನ ಲಾಡಖಾನ ಅವರು ತೀರ್ಪು ಪ್ರಕಟಿಸಿದರು.
ನಗರದ ಕೋತಿತೋಪು ನಿವಾಸಿ ಮುಕುಂದ ಎಂಬವರು ನಾದಿನಿ ಸವಿತಾ ಎಂಬವರನ್ನು 2021 ಫೆಬ್ರವರಿ 2ರಂದು ಹೆರಿಗೆ ನೋವಿನ ಕಾರಣ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಜಿಲ್ಲಾಸ್ಪತ್ರೆಯ ತಕ್ಷ ವೈದ್ಯೆ ಡಾ.ಸಿ.ಎನ್.ಮಹಾಲಕ್ಷ್ಮಮ್ಮ ಅವರು ಸವಿತಾರಿಗೆ ಹೆರಿಗೆ ಮಾಡಿಸಲು 3 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಾದಿನಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿ 2 ಸಾವಿರ ರೂ. ಲಂಚ ನೀಡಲು ಒಪ್ಪಿ ರಾತ್ರಿ 9.30 ಗಂಟೆಗೆ ‘ಡಿ‘ ಗ್ರೂಪ್ನೌಕರ ಬರಕತ್‌ಅಲಿ ಎಂಬಾತನಿಗೆ 2 ಸಾವಿರ ಕೊಡಿಸಿ, ನಂತರ ಬರಕತ್‌ಅಲಿ ಮೂಲಕ ಲಂಚದ ಹಣವನ್ನು ಅಪರಾಧಿ ವೈದ್ಯೆ ಪಡೆದುಕೊಂಡಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸ್‌ಠಾಣೆಗೆ ದೂರು ನೀಡಲಾಗಿತ್ತು.
ಫೆ.4ರಂದು ಮುಕುಂದ ಜಿ.ಟಿ. ಅವರು ಲೋಕಾಯುಕ್ತ ಪೊಲೀಸ್‌ಠಾಣೆಗೆ ದೂರು ನೀಡಿದ್ದ ಮೇರೆಗೆ ಪ್ರಕರಣ ದಾಖಲಾಗಿತ್ತು. ಡಿಎಸ್‌ಪಿ ಮಲ್ಲಿಕಾರ್ಜುನ ಚುಕ್ಕಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿ ಆರೋಪಿ ವೈದ್ಯೆ ದೋಷಿ ಎಂದು ಸೆ.19, 2025ರಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ರೂ. ದಂಡ ಹಾಗೂ ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎನ್.ಬಸವರಾಜು ವಾದ ಮಂಡಿಸಿದ್ದರು. ಡಾ.ಸಿ.ಎನ್.ಮಹಾಲಕ್ಷ್ಮಮ್ಮ ನಿವೃತ್ತಿಯಾಗಿದ್ದು ಇದೀಗ ಶಿಕ್ಷೆ ಪ್ರಕಟವಾಗಿದೆ.

