ಮಾರುಕಟ್ಟೆಗೆ ಅಪಾಯಕಾರಿ ಚೀನಾ ಬೆಳ್ಳುಳ್ಳಿ, ಖರೀದಿ ಮುನ್ನ ಯೋಚಿಸಿ, ಅಧಿಕಾರಿಗಳ ದಿಢೀರ್ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಈ ನಡುವೆ ಅಸಲಿ ಬೆಳ್ಳುಳ್ಳಿ ಜೊತೆ ಸಿಮೆಂಟ್ ನಿಂದ ತಯಾರಿಸಿದ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದ ವರದಿಗಳು ದೇಶದ ಹಲವೆಡೆ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ
, ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟರುವ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ, ಚೀನಾ ದೇಶದ ಬೆಳ್ಳುಳ್ಳಿ ಮಾರಾಟವಾಗುತ್ತಿರುವ ದೂರುಗಳು ಕೇಳಿಬರಲಾರಂಭಿಸಿವೆ.

ಈ ನಡುವೆ, ಶಿವಮೊಗ್ಗ ನಗರದ ವಿವಿಧೆಡೆಯೂ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ, ಎಗ್ಗಿಲ್ಲದೆ ನಡೆಯುತ್ತಿರುವ ದೂರುಗಳು ಬಂದಿವೆ! ಈ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡವು ಸೆ. 28 ರ ಶನಿವಾರ ವಿವಿಧೆಡೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ.

ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾದ ಏಳೆಂಟು ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ. ಶಂಕಿತ ಚೀನಾ ಬೆಳ್ಳುಳ್ಳಿ ವಶಕ್ಕೆ ಪಡೆದುಕೊಂಡಿದೆ.

ವಶಕ್ಕೆ ಪಡೆದ ಬೆಳ್ಳುಳ್ಳಿಯ ಸ್ಯಾಂಪಲ್ ಗಳನ್ನು ಬೆಂಗಳೂರಿನ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ, ಚೀನಾ ಬೆಳ್ಳುಳ್ಳಿ ಹೌದೋ? ಅಲ್ಲವೋ? ಎಂಬುವುದರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ. ಅಲ್ಲಿಯವರೆಗೂ ಶಂಕಿತ ಬೆಳ್ಳುಳ್ಳಿ ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡದ ಮೂಲಗಳು ತಿಳಿಸಿವೆ.

 ಆರೋಗ್ಯಕ್ಕೆ ಹಾನಿಕಾರಕ :
ಚೀನಾ ಬೆಳ್ಳುಳ್ಳಿಗೆ ಕೃಷಿ ಸಮಯದಲ್ಲಿ ಅತೀ ಹೆಚ್ಚು ಪ್ರಮಾಣದ ಕೀಟನಾಶಕ ಹಾಗೂ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ .

ಇದನ್ನು ಸೇವಿಸುವ ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕಾರಣದಿಂದಲೇ 10 ವರ್ಷಗಳ ಹಿಂದೆಯೇ ಭಾರತ ಸರ್ಕಾರ ಚೀನಾ ಬೆಳ್ಳುಳ್ಳಿ ಆಮದು ನಿಷೇಧಿಸಿತ್ತು. ದೇಶದಲ್ಲಿ ಈ ಬೆಳ್ಳುಳ್ಳಿ ಮಾರಾಟ ನಿರ್ಬಂಧಿಸಿತ್ತು.

ಚೀನಾ ಬೆಳ್ಳುಳ್ಳಿಗೆ ಹೋಲಿಸಿದರೆ, ಭಾರತದಲ್ಲಿ ಬೆಳ್ಳುಳ್ಳಿ ಬೆಳೆಯುವ ವೇಳೆ ಕಡಿಮೆ ಪ್ರಮಾಣದ ರಸಗೊಬ್ಬರ ಹಾಗೂ ರಾಸಾಯನಿಕಗಳ ಬಳಕೆ ಮಾಡಲಾಗುತ್ತದೆ. ಇದು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.

ಆದರೆ ಚೀನೀ ಬೆಳ್ಳುಳ್ಳಿಯು ಕಡಿಮೆ ದರಕ್ಕೆ ಲಭ್ಯವಾಗುತ್ತದೆ. ಈ ಕಾರಣದಿಂದ ವಾಮಮಾರ್ಗದಲ್ಲಿ ದೇಶದ ವಿವಿಧ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";