ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಆರಂಭಗೊಂಡಿದ್ದು, ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದೆ.
ಮೇ 05 ರಿಂದ 17 ರವರೆಗೆ ನಡೆಯುವ ಮೊದಲ ಹಂತದ ಸಮೀಕ್ಷೆಯಲ್ಲಿ ಮನೆಮನೆ ಭೇಟಿ ನೀಡಿ, ಮೇ 19 ರಿಂದ 21 ರವರೆಗೆ ನಡೆಯುವ ಎರಡನೇ ಹಂತ ಸಮೀಕ್ಷೆ ಬ್ಲಾಕ್ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ ಭೇಟಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವುದು. ಮೂರನೇ ಹಂತ ಮೇ 19 ರಿಂದ 21 ರವರೆಗೆ ಸ್ವಯಂ ಘೋಷಣೆ (ಆನ್ಲೈನ್ ಮೂಲಕ) ಸಮೀಕ್ಷೆಗೆ ಮಾಹಿತಿ ಒದಗಿಸಬಹುದಾಗಿದೆ.

ಒಳ ಮೀಸಲಾತಿ ಜಾತಿ ಗಣತಿಗೆ 1,825 ಶಿಕ್ಷಕರ ನಿಯೋಜನೆ:
ರಾಜ್ಯ ಸರ್ಕಾರವು ಅಭಿವೃದ್ಧಿ ಪಡಿಸಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ2025 ಮೊಬೈಲ್ ಆ್ಯಪ್ ಮೂಲಕ ದತ್ತಾಂಶ ಸಂಗ್ರಹಿಸಲಾಗುವುದು. ಸಮೀಕ್ಷಾ ಕಾರ್ಯ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ 3 ಮಾಸ್ಟರ್ ಟ್ರೈನರ್ಸ್ಗಳನ್ನು ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿ ತಾಲ್ಲೂಕಿನಿಂದ 5 ರಂತೆ ಒಟ್ಟು 30 ತಾಲ್ಲೂಕು ಮಾಸ್ಟರ್ಸ್ ಟ್ರೈನರ್ಸ್ಗಳು, 1,661 ಗಣತೀದಾರರು, 164 ಮೇಲ್ಚಿಚಾರಕರು ಸೇರಿದಂತೆ ಒಟ್ಟು 1,825 ಶಿಕ್ಷಕರನ್ನು ಶಿಕ್ಷಣ ಇಲಾಖೆಯಿಂದ ನಿಯೋಜಿಸಲಾಗಿದೆ ಅಲ್ಲದೆ, ಸಮಗ್ರ ಮೇಲ್ಚಿಚಾರಣೆಗೆ  ತಾಲ್ಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ 6 ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

        ಸಮೀಕ್ಷಾ ಕಾರ್ಯದ ಪೂರ್ವಭಾವಿಯಾಗಿ ರಾಜ್ಯ ಮಟ್ಟದಲ್ಲಿ ನಡೆದ ತರಬೇತಿಗೆ ಚಿತ್ರದುರ್ಗ ಜಿಲ್ಲಾ ಹಂತದಿಂದ 03 ಮಾಸ್ಟರ್ ಟ್ರೈನರ್ಗಳನ್ನು ನಿಯೋಜಿಸಲಾಗಿದ್ದು, ಮಾಸ್ಟರ್ ಟ್ರೈನರ್ಗಳು 2025 ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ, ಸಮೀಕ್ಷಾ ಕಾರ್ಯಗಳ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಮೀಕ್ಷೆ ದತ್ತಾಂಶ ಸಂಗ್ರಹಿಸುವ ಕುರಿತು ಈಗಾಗಲೇ ತರಬೇತಿಯನ್ನು ಪಡೆದ ಜಿಲ್ಲಾ ಮಟ್ಟದ ಮಾಸ್ಟರ್ಸ್ ಟ್ರೈನರ್ಸ್ಗಳಿಂದ ತಾಲ್ಲೂಕು ಮಟ್ಟದ ಮಾಸ್ಟರ್ಸ್ ಟ್ರೈನರ್ಸ್ಗಳಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ 2025 ಏಪ್ರಿಲ್ 28ರಂದು ತರಬೇತಿ ನೀಡಲಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ತಾಲ್ಲೂಕು ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಮೀಕ್ಷೆ ದತ್ತಾಂಶ ಸಂಗ್ರಹಿಸುವ ಕುರಿತು ಈಗಾಗಲೇ ತರಬೇತಿ ಪಡೆದ ತಾಲ್ಲೂಕು ಮಟ್ಟದ ಮಾಸ್ಟರ್ಸ್ ಟ್ರೈನರ್ಸ್ಗಳಿಂದ 2025 ಮೇ 02ರಂದು ಸಮೀಕ್ಷಾ ಕಾರ್ಯ ಕೈಗೊಳ್ಳುವ ಕುರಿತು ನಿಯೋಜಿಸಲಾದ ಶಿಕ್ಷಣ ಇಲಾಖೆಯ ಗಣತೀದಾರರಿಗೆ ಮತ್ತು ಮೇಲ್ವಿಚಾರಕರುಗಳಿಗೆ ತರಬೇತಿ ನೀಡಲಾಗಿದೆ.

         ಸಮೀಕ್ಷೆ ಕುರಿತು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ  ಎಲ್ಲಾ ಪರಿಶಿಷ್ಟ ಜಾತಿ ಜನಾಂಗದ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳ ಮೂಲಕ, ದಿನಪತ್ರಿಕೆ ಹಾಗೂ ಆಕಾಶವಾಣಿ ಪ್ರಸಾರ ಕೇಂದ್ರದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಎಲ್ಲಾ ಪರಿಶಿಷ್ಟ ಜಾತಿ ಜನಾಂಗದವರ ಮನೆ ಮನೆಗೆ ಸಮೀಕ್ಷಾ ಕಾರ್ಯಕ್ಕೆ ಭೇಟಿ ನೀಡುವ ಗಣತಿದಾರರು ಮನೆಯ ಮುಖ್ಯಸ್ಥರ ಒಪ್ಪಿಗೆ ಪಡೆದು ದತ್ತಾಂಶವನ್ನು ಸಂಗ್ರಹಿಸಲು ನಿರ್ದೇಶಿಸಲಾಗಿದೆ.  ಸಮೀಕ್ಷೆ ನಡೆಸುವ ಎಲ್ಲಾ ಗಣತಿದಾರರಿಗೆ ಅಗತ್ಯ ಕಿಟ್ಗಳನ್ನು ವಿತರಿಸಲಾಗಿದೆ.       
ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸೇರಿದಂತೆ ಗಣತಿದಾರರು, ಮೇಲ್ವಿಚಾರಕರು, ಸಮಾಜದ ಹಲವು ಮುಖಂಡರು ಇದ್ದರು.

 

Share This Article
error: Content is protected !!
";