ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ನಗರದ ಗಣೇಶ ವಿಸರ್ಜನೆ ವೇಳೆ ವೆಂಕಾ ಭೋವಿ ಕಾಲೋನಿಯಲ್ಲಿ ಕಲ್ಲುತೂರಾಟ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಹಲವಾರು ಮನೆಗಳು ಮತ್ತು ವಾಹನಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.
ಪ್ರಕ್ಷುಬ್ದಗೊಂಡಿದ್ದ ನಗರದ ಇದೀಗ ತಣ್ಣಗಾಗಿದೆ. ಇದಕ್ಕೆ ಕಾರಣವಾಗಿದ್ದು, ನಿನ್ನೆ ಗಣೇಶ ಮೆರವಣಿಗೆ ವೇಳೆ ನಡೆದ ಎರಡು ಕೋಮಿನ ನಡುವೆ ಕಲ್ಲು ತೂರಾಟ. ಇವರೆಗೆ ದಾಖಲಾಗಿರುವ 4 ಪ್ರಕರಣಗಳಲ್ಲಿ 30 ಜನರನ್ನು ಬಂಧಿಸಲಾಗಿದೆ. ನಗರದಲ್ಲಿ ಇನ್ನು ಗಣೇಶ ವಿಸರ್ಜನೆ ಹಿನ್ನೆಲೆ 2 ದಿನ ಮದ್ಯ ಮಾರಾಟ ನಿಷೇಧಿಸಿ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಸೆ. 21 ರಂದು ಹಾಗೂ ಚನ್ನಗಿರಿ ತಾಲೂಕಿನಾದ್ಯಂತ ಮತ್ತು ಹೊನ್ನಾಳಿ ಪಟ್ಟಣದಲ್ಲಿ ಸೆ. 22 ರಂದು ಗಣೇಶಮೂರ್ತಿ ವಿಸರ್ಜನೆ ನಡೆಯಲಿದೆ ಹೀಗಾಗಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟ ನಿರ್ಬಂಧ ಮಾಡಲಾಗಿದೆ.ಸೆ. 21 ರಂದು ಮಲೇಬೆನ್ನೂರು ವ್ಯಾಪ್ತಿ ಮತ್ತು ಸೆ. 22ರಂದು ಚನ್ನಗಿರಿ ತಾಲ್ಲೂಕಿನಾದ್ಯಂತ ಹಾಗೂ ಹೊನ್ನಾಳಿ ಪಟ್ಟಣ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದು, ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ರೇಣುಕಾಚಾರ್ಯ ಭೇಟಿ-
ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ಕೇಸ್ನಲ್ಲಿ ಬಂಧಿಸಲ್ಪಟ್ಟಿರುವ ಯುವಕರ ಮನೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಸಮರ್ಥ ಗೃಹ ಸಚಿವರಿದ್ದು ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿಲ್ಲ. ಹಿಂದು ವಿರೋಧಿ ಸರ್ಕಾರ ಇದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆ ಸರ್ಕಾರ ಇದೆ ಎಂದು ಕಿಡಿ ಕಾರಿದ್ದಾರೆ.
ಹಿಂದೂಗಳು ಕೈಗೆ ಬಳೆ ಹಾಕಿಕೊಂಡಿಲ್ಲ. ಹಿಂದುಗಳನ್ನ ಮುಟ್ಟಿದರೆ ಸುಮ್ಮನಿರಲ್ಲ. ಅಂತಹ ಸಂದರ್ಭ ಬಂದರೆ ಮಚ್ಚು ಬಳಸುವುದು ಗೊತ್ತು. ದೇಶ ದ್ರೋಹಿಗಳನ್ನ ಕಂಡ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.