ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ಐವರ ಸಾವು

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಭೀಕರ ರಸ್ತೆ ಅಪಘಾತದಲ್ಲಿ ಇಡೀ ಕುಟುಂಬವೇ ಮಸಣ ಸೇರಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ಸಂಭವಿಸಿದೆ.
ಸಾರಿಗೆ ಬಸ್ ಬೈಕ್​ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.  ಇದರೊಂದಿಗೆ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು
, ಇಡೀ ಕುಟುಂಬವೇ ಬಲಿಯಾಗಿದೆ.

ಒಂದು ವರ್ಷದ ಮಗು ಹನುಮಂತ(1), ಹನುಮಂತ ತಂದೆ ಆಂಜನೇಯ (35) ತಾಯಿ ಗಂಗಮ್ಮ (28), ಹನುಮಂತನ ಸಹೋದರನ ಮಕ್ಕಳಾದ ಪವಿತ್ರ (5) ಹಾಗೂ ರಾಯಪ್ಪ (3) ಸಾವನ್ನಪ್ಪಿದ ದುರ್ವೈವಿಗಳು.
ಮೂವರು ಮಕ್ಕಳು ಸೇರಿ ಒಂದೇ ಬೈಕ್ ನಲ್ಲಿ ಐದು ಜನ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದರು ಎನ್ನಲಾಗಿದೆ.
ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್​​ಆರ್​​ಟಿಸಿ ಬಸ್​ ರಭಸವಾಗಿ ಗುದ್ದಿದೆ.

ಘಟನೆಯಲ್ಲಿ ಇಡೀ ಕುಟುಂಬವೇ ಬಲಿಯಾಗಿದೆ. ಮೃತರಲ್ಲಿ ಮೂವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮೆಟಮರಡಿ ದೊಡ್ಡಿಯವರು. ಮೆಟಮರಡಿ ದೊಡಗಡ್ಡಿಯಲ್ಲಿ ಊರ ದೇವರ ಜಾತ್ರೆ ಇರುವುದರಿಂದ ತವರು ಮನೆಯಲ್ಲಿದ್ದ ಪತ್ನಿ ಮತ್ತು ಮಗನನ್ನ ಕರೆದುಕೊಂಡು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮೃತದೇಹಗಳು ಸುರಪುರ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನಾಳೆ (ಫೆಬ್ರವರಿ 06) ಮೆಟಮರಡಿ ದೊಡ್ಡಿಯಲ್ಲಿ ಮೂವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನುಳಿದ ಇಬ್ಬರು ಮಕ್ಕಳ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹಳಿಸಗರ ಗ್ರಾಮದಲ್ಲಿ ನಡೆಯಲಿದೆ ಎನ್ನಲಾಗಿದೆ.

 

Share This Article
error: Content is protected !!
";