ಬೀದಿ ನಾಯಿಗಳ ಕಾಟ ಮೂರು ವರ್ಷದ ಬಾಲಕನ ಮೇಲೆ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಸುಮಾರು ಎರಡು ತಿಂಗಳಿನಿಂದ ಚಳ್ಳಕೆರೆ ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರು, ಮಕ್ಕಳು, ಮಹಿಳೆಯರು ಹೆಜ್ಜೆ ಹೆಜ್ಜೆಗೂ ರಸ್ತೆಯಲ್ಲಿ ಬೀದಿ ನಾಯಿಗಳು ಇರುವಿಕೆಯನ್ನು ಗಮನಿಸಿ ರಸ್ತೆಗೆ ಇಳಿಯಬೇಕಿದೆ. ಮೈಮರೆತು ರಸ್ತೆಗೆ ಬಂದರೆ ಬೀದಿನಾಯಿಗಳು ಓಡಿಸಿಕೊಂಡು ಬಂದು ಕಚ್ಚುತ್ತಿವೆ.

ಪ್ರತಿನಿತ್ಯ ನಾಯಿಗಳ ಕಾಟ ಮಿತಿಮೀರುತ್ತಿದ್ದರೂ ನಗರಸಭೆಯಾಗಲಿ, ಗ್ರಾಮ ಪಂಚಾಯಿತಿ ಆಡಳಿತವಾಗಲಿ ನಾಯಿಗಳ ಕಾಟವನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ. ಇದುವರೆಗೂ ಸುಮಾರು ೫೦೦ಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿವೆ. ನಗರ ಪ್ರದೇಶದಲ್ಲಿ ೨೦೦, ಗ್ರಾಮೀಣ ಪ್ರದೇಶದಲ್ಲಿ ೩೦೦ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುತ್ತಾರೆ. ನಾಯಿಗಳಿಂದ ಕಚ್ಚಿಸಿಕೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ನಗರದ ಕಾಟಪ್ಪನಹಟ್ಟಿ, ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ, ಚಿತ್ರಯ್ಯನಹಟ್ಟಿ, ಗಾಂಧಿನಗರ, ರಹೀಂನಗರ, ಅಂಬೇಡ್ಕರ್ ನಗರ, ಶಾಂತಿನಗರ, ಮದಕರಿನಗರ, ವಾಲ್ಮೀಕಿ ನಗರ ವಿಠಲನಗರವೂ ಸೇರಿದಂತೆ ಅನೇಕ ಕಡೆ ಬೀದಿನಾಯಿಗಳು ಗುಂಪು, ಗುಂಪಾಗಿ ಓಡಾಡುತ್ತಾ ದಿಢೀರನೆ ಸಾರ್ವಜನಿಕರು, ವಾಹನ ಸವಾರರ ಮೇಲೆ ಎರಗುತ್ತಿವೆ. ಭಯಭೀತರಾಗುವ ಸಾರ್ವಜನಿಕರಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ನಾಯಿಗಳ ಭಯದಿಂದ ಜನರು ಬೆಳಗಿನ ಸಮಯದಲ್ಲಿ ಓಡಾಟ ನಡೆಸುವುದೇ ಕಡಿಮೆ ಮಾಡಿದ್ದಾರೆ.

ನಗರಸಭೆ ಆಡಳಿತ ನಗರದಾದ್ಯಂತ ಬೀದಿ, ಬೀದಿಗಳಲ್ಲಿ ಅಲೆದಾಡುವ ನಾಯಿಗಳ ಕಾಟವನ್ನು ನಿಯಂತ್ರಿಸುವಲ್ಲಿ ಮುಂದಾಗಬೇಕಿದೆ. ಇತ್ತೀಚಿಗಷ್ಟೇ ಕಾಟಪ್ಪನಹಟ್ಟಿಯಗೊಲ್ಲರಹಟ್ಟಿಯಲ್ಲಿ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ೩ ವರ್ಷದ ಸಿಂಪು ಎಂಬ ಬಾಲಕನ ಕೈಗೆ ಬಾಯಿಹಾಕಿ ಅವನ ಕೈಯ ಮಾಂಸವನ್ನು ಕಿತ್ತಿದೆ.

ಬಿಡಿಸಲು ಬಂದ ಅವರ ತಂದೆ ಮಂಜುನಾಥ(೩೩)ನ ಮೇಲೂ ನಾಯಿ ದಾಳಿ ನಡೆಸಿ ಎರಡ್ಮೂರು ಕಡೆ ಕಚ್ಚಿದೆ. ಹಳೇ ಟೌನ್‌ನ ತೇರು ಬೀದಿಯಲ್ಲಿ ಬೀದಿನಾಯಿಯೊಂದು ಸಿಕ್ಕಿ ಸಿಕ್ಕ ಜನರನ್ನು ಕಚ್ಚುತ್ತಿದ್ದು, ಅದನ್ನು ಕಂಡ ಸ್ಥಳೀಯರು ನಾಯಿಯನ್ನು ದೊಣ್ಣೆಯಿಂದ ಹೊಡೆದು ಓಡಿಸಿದ್ದಾರೆ.

ಒಟ್ಟಿನಲ್ಲಿ ನಾಯಿಗಳ ಕಾಟದಿಂದ ಸಾರ್ವಜನಿಕರಿಗೆ ರಕ್ಷಣೆ ನೀಡುವ ಕೆಲಸವನ್ನು ನಗರಸಭೆ ಆಡಳಿತ ನೀಡಬೇಕಿದೆ. ಈಗಾಗಲೇ ನಾಯಿಗಳ ಕಾಟದಿಂದ ಸಾರ್ವಜನಿಕರು ರೋಸಿದ್ದಾರೆ. ಇತ್ತೀಚೆಗೆ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ನಾಯಿಗಳ ಉಪಟಳದ ಬಗ್ಗೆ ಸದಸ್ಯರೇ ಧ್ವನಿ ಎತ್ತಿ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

 

- Advertisement -  - Advertisement - 
Share This Article
error: Content is protected !!
";