ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಚಿತ್ರದುರ್ಗ ಇಲ್ಲಿ ಮಾ.೬ ಮತ್ತು ೭ ರಂದು ಜಿಲ್ಲೆಯ ಸ್ಥಾನಿಕ ಸಂಸ್ಥಾನಗಳು ಕುರಿತು ಎರಡು ದಿನಗಳ ವಿಚಾರ ಸಂಕಿರಣ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೬ ರಂದು ಬೆಳಿಗ್ಗೆ ೧೦-೩೦ ಕ್ಕೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಹೈದರಾಲಿ ಚಿತ್ರದುರ್ಗದ ಕೋಟೆ ಮೇಲೆ ದಂಡೆತ್ತಿ ಬಂದ ಇತಿಹಾಸವಿದೆ. ಚಿತ್ರದುರ್ಗಕ್ಕೆ ಪಾಳೆಯಗಾರರ ಕೊಡುಗೆ ಏನು ಎನ್ನುವ ವಿಚಾರ ಕುರಿತು ವಿಚಾರ ಸಂಕಿರಣದಲ್ಲಿ ಬೆಳಕು ಚೆಲ್ಲಲಾಗುವುದೆಂದರು.
ಡಾ.ಬಿ.ಸುರೇಶ ಮಾತನಾಡಿ ಪಾಳೆಯಗಾರರು ಆಳಿದ ಚಿತ್ರದುರ್ಗ ಜಿಲ್ಲೆಯಲ್ಲಿ ದೇವಾಲಯ, ಶಾಸನಗಳು ಇವೆ. ಜಿಲ್ಲೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಿಚಾರಗಳ ಮೇಲೆ ಬೆಳಕು ಚೆಲ್ಲುವುದು ವಿಚಾರ ಸಂಕಿರಣದ ಉದ್ದೇಶ ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕಿ ತಾರಿಣಿ ಶುಭದಾಯಿನಿ ಮಾತನಾಡಿ ಪಾಳೆಯಗಾರರು ಆಳಿದ ಚಿತ್ರದುರ್ಗಕ್ಕೆ ತನ್ನದೆ ಆತ ಗತ ವೈಭವವಿದೆ. ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಸಾರ್ವಜನಿಕರಿಗೂ ಮುಕ್ತ ಅವಕಾಶ ಕೊಟ್ಟಿದ್ದೇವೆಂದರು.
ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಶಿವಪ್ಪ ಮಾತನಾಡಿ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ವಿಚಾರ ಸಂಕಿರಣಕ್ಕೆ ಆಗಮಿಸುವರು. ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ವಿಚಾರ ಸಂಕಿರಣದಲ್ಲಿ ಚಿತ್ರದುರ್ಗದ ಇತಿಹಾಸ ಕುರಿತು ಮಾತನಾಡುವರು. ಮುನ್ನೂರರಿಂದ ಐದುನೂರು ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಆರ್.ಗಂಗಾಧರ, ಶಿವಪ್ರಸಾದ್, ಶ್ರೀನಿವಾಸ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

